Index   ವಚನ - 967    Search  
 
ಎಡೆಬಿಡಾರಕ್ಕೆ ಕರ್ತರೆಂಬರಯ್ಯಾ, ಎಡೆ ಬಿಡಾರದ ಘನವನೆತ್ತಬಲ್ಲರೊ? ಆದಿ ಅನಾದಿಯಿಲ್ಲದಂದು, ಶೂನ್ಯ ನಿಶ್ಶೂನ್ಯವಿಲ್ಲದಂದು, ನಾದ ಬಿಂದು ಕಳೆ ಹುಟ್ಟದಂದು, ಬ್ರಹ್ಮವಿಷ್ಣ್ವಾದಿಗಳಿಲ್ಲದಂದು, ಅಷ್ಟದಿಕ್ಕು ನವಖಂಡಗಳಿಲ್ಲದಂದು, ನಿರಾಳ ನಿಶ್ಶೂನ್ಯ ನಿರ್ಭೇದ್ಯವಾದ ಪರಮಚಿತ್ಕಲೆಯೆಂಬ ಕೊಣದಲ್ಲಿಪ್ಪ ಪರಮಾಮೃತವನು ಸುಯಿಧಾನವೆಂಬ ಹಸ್ತದಿಂದ ಸುಜ್ಞಾನವೆಂಬ ಗಿಣಿಲಿನಲ್ಲಿ ಗಡಣಿಸಿಕೊಂಡು, ನಿರ್ಮಳ ಸದ್ಭಾವ ಹಸ್ತದಿಂದ ಚಿನ್ಮಯ ಮಹಾಲಿಂಗಕ್ಕರ್ಪಿಸಿ, ಚಿದ್ಘನಪ್ರಸಾದವ ಸವಿದು, ಅಸಂಖ್ಯಾತ ಬ್ರಹ್ಮಾಂಡ ಪಿಂಡಾಂಡದೊಳಗೆ ಪರಿಪೂರ್ಣವಾಗಿ, ತನ್ನ ನಿಲವ ತಾನರಿಯ ಬಲ್ಲಡೆ ಎಡೆಬಿಡಾರಕ್ಕೆ ಕರ್ತನೆಂಬೆನಯ್ಯಾ. ಹಾಂಗಲ್ಲದೆ, ಹೊನ್ನಿಂಗೆ ಮಣ್ಣಿಂಗೆ ಹೆಣ್ಣಿಂಗೆ ಕೂಳಿಂಗೆ ಮಣ್ಣಮನೆ, ದೇಗುಲಕೆ ಹೊಡೆದಾಡಿ, ಭವಾಂಬುಧಿಯಲ್ಲಿ ತೇಂಕಾಡುವಂಥ ಕುನ್ನಿಮಾನವರು ಎಡೆ ಬಿಡಾರಕ್ಕೆ ಸಲ್ಲರು ಕಾಣಾ ಗುಹೇಶ್ವರಾ.