Index   ವಚನ - 702    Search  
 
ನಿರಾಮಯವೆಂಬ ಭಕ್ತನ ಅಂಗದಲ್ಲಿ ಝೇಂಕಾರವೆಂಬ ಜಂಗಮವು ಜಂಗಿಟ್ಟು ನಡೆಯಲೊಡನೆ ನಿರಂಜನವಾಯಿತ್ತು. ಆ ನಿರಂಜನದೊಡನೆ ನಿರಾಕಾರವಾಯಿತ್ತು. ಆ ನಿರಕಾರದೊಡನೆ ಆಕಾರಲಿಂಗವಾಗಿ, ಮಂತ್ರಘೋಷವ ಘೋಷಿಸುತಿರ್ಪುದು ನೋಡಾ. ಆ ಲಿಂಗದ ಬೆಳಗಿನೊಳಗೆ ನಾದಪ್ರಭೆ, ಬಿಂದುಪ್ರಭೆ, ಕಳಾಪ್ರಭೆ ಇಂತೀ ತ್ರಿವಿಧಪ್ರಭೆಗಳು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು ನೋಡಾ. ನಾದಪ್ರಭೆಯು ಭಕ್ತ-ಮಹೇಶ್ವರ, ಬಿಂದು ಪ್ರಭೆಯು ಪ್ರಸಾದಿ-ಪ್ರಾಣಲಿಂಗಿ, ಕಳಾಪ್ರಭೆಯು ಶರಣ-ಐಕ್ಯ. ಇಂತೀ ಷಡ್ವಿಧಮೂರ್ತಿಗಳಿಗೆ ಷಡ್ವಿಧಲಿಂಗವು. ಅವು ಆವಾವುಯೆಂದೊಡೆ: ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಿಲಿಂಗ ಮಹಾಲಿಂಗ. ಈ ಷಡ್ವಿಧಲಿಂಗಕು ಷಡ್ವಿಧ ಶಕ್ತಿಯರು ಅವು ಆವಾವುಯೆಂದೊಡೆ: ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಫಾಶಕ್ತಿ, ಆದಿಶಕ್ತಿ, ಪರಾಶಕ್ತಿ, ಚಿತ್‍ಶಕ್ತಿ. ಇಂತೀ ಶಕ್ತಿಯರಿಗೂ ಷಡ್ವಿಧಭಕ್ತಿ. ಅವು ಆವಾವುಯೆಂದೊಡೆ: ಸದ್ಭಕ್ತಿ, ನೈಷ್ಠಿಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ, ಸಮರತಿಭಕ್ತಿ, ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೂ ಷಡ್ವಿಧಹಸ್ತ. ಅವು ಆವಾವುಯೆಂದೊಡೆ: ಸುಚಿತ್ತಹಸ್ತ, ಸುಬುದ್ಧಿಹಸ್ತ, ನಿರಹಂಕಾರಹಸ್ತ, ಸುಮನಹಸ್ತ, ಸುಜ್ಞಾನಹಸ್ತ, ನಿರ್ಭಾವಹಸ್ತ, ಈ ಷಡ್ವಿಧಹಸ್ತಗಳಿಗೂ ಷಡ್ವಿಧ ಕಲೆಗಳು. ಅವು ಆವಾವುಯೆಂದೊಡೆ: ನಿವೃತ್ತಿಕಲೆ, ಪ್ರತಿಷ್ಠಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ, ಶಾಂತ್ಯತೀತೋತ್ತರ ಕಲೆ. ಈ ಷಡ್ವಿಧಕಲೆಗಳಿಗೂ ಷಡ್ವಿಧಪರಂಗಳು. ಅವು ಆವಾವುಯೆಂದೊಡೆ: ಶುದ್ಧಜ್ಞಾನವೇ ಪರ, ಬದ್ಧಜ್ಞಾನವೇ ಪರ, ನಿರ್ಮಲಜ್ಞಾನವೇ ಪರ, ಮನೋಜ್ಞಾನವೇ ಪರ, ಸುಜ್ಞಾನವೇ ಪರ, ಪರಮಜ್ಞಾನವೇ ಪರ. ಈ ಷಡ್ವಿಧಪರಗಳಿಂದತ್ತತ್ತ ಮಹಾಜ್ಞಾನದ ಬೆಳಗು, ಸ್ವಯಜ್ಞಾನದ ತಂಪು, ನಿರಂಜನದ ಸುಖ. ಆ ನಿರಂಜನದ ಸುಖದೊಳಗೆ ಸುಳಿದಾಡುವ ಝೇಂಕಾರವೆಂಬ ಜಂಗಮವ ನಿರಾಮಯವೆಂಬ ಭಕ್ತನೇ ಬಲ್ಲ ನೋಡಾ ಝೇಂಕಾರ ನಿಜಲಿಂಗಪ್ರಭುವೆ.