ವಚನ - 35     
 
ಅಯ್ಯಾ, ವಿರಕ್ತ ವಿರಕ್ತರೆಂದೇನೊ? ವಿರಕ್ತಿಯ ಮಾತನಾಡುವರಲ್ಲದೆ ವಿರಕ್ತಿಕೆ ಎಲ್ಲರಿಗೆಲ್ಲಿಯದೊ? ಕೈಯೊಳಗಣ ಓಲೆ, ಕಂಕುಳೊಳಗಣ ಸಂಪುಟ, ಬಾಯೊಳಗಣ ಮಾತು. ಪುಣ್ಯವಿಲ್ಲ ಪಾಪವಿಲ್ಲ, ಕರ್ಮವಿಲ್ಲ ಧರ್ಮವಿಲ್ಲ, ಸತ್ಯವಿಲ್ಲ ಅಸತ್ಯವಿಲ್ಲವೆಂದು ಮಾತನಾಡುತಿಪ್ಪರು. ಅದೆಂತೆಂದಡೆ: ಕಂಗಳ ನೋಟ ಹಿಂಗದನ್ನಕ್ಕ, ಕೈಯೊಳಗಣ ಬೆರಟು ನಿಲ್ಲದನ್ನಕ್ಕ, ಹೃದಯದ ಕಾಮ ಉಡುಗದನ್ನಕ್ಕ ವಿರಕ್ತಿಕೆ ಎಲ್ಲರಿಗೆಲ್ಲಿಯದೊ? ಬಲ್ಲ ವಿರಕ್ತನ ಹೃದಯವುದಕದೊಳಗಣ ಗುಂಡಿನಲ್ಲಿ ಮಾಣಿಕ್ಯದ ಪ್ರಭೆಯ ಕಂಡವರಾರೊ? ಕಂಡಾತಂಗೆ ಕಂಗಳಲ್ಲಿ ನೋಡಿದ ಸರ್ವವಸ್ತುಗಳು ಆ ಲಿಂಗಕ್ಕರ್ಪಿತ. ಆ ಲಿಂಗವ ಕಂಡಾತಂಗೆ, ಕರ್ಣದಲ್ಲಿ ಕೇಳಿದ ಆಗಮ ಪುರಾಣಂಗಳು ಆ ಲಿಂಗಕ್ಕರ್ಪಿತ. ಆ ಲಿಂಗವ ಕಂಡಾತಂಗೆ ಜಿಹ್ವೆಯಲ್ಲಿ ರುಚಿಸಿದ ಪದಾರ್ಥಂಗಳು ಆ ಲಿಂಗಕ್ಕರ್ಪಿತ. ಅದೆಂತೆಂದಡೆ: ಅಂಗವೂ ಲಿಂಗವೂ ಏಕೀಭವಿಸಿದಡೆ ಅವಂಗೆ ಪುಣ್ಯವಿಲ್ಲ ಪಾಪವಿಲ್ಲ, ಕರ್ಮವಿಲ್ಲ ಧರ್ಮವಿಲ್ಲ, ಸತ್ಯವಿಲ್ಲ ಅಸತ್ಯವಿಲ್ಲ. ಅದೆಂತೆಂದಡೆ: ಬಂದುದ ಲಿಂಗಕ್ಕೆ ಕೊಟ್ಟನಾಗಿ, ಬಾರದುದ ಬಯಸನಾಗಿ. ಅಂಗನೆಯರು ಬಂದು ಕಾಮಿತಾರ್ಥದಿಂದ ತನ್ನನಪ್ಪಿದಡೆ ತಾ ಮಹಾಲಿಂಗವನಪ್ಪುವನಾಗಿ, ಅವಂಗೆ ಮುಖ ಬೇರಲ್ಲದೆ, ಆತ್ಮನೆಲ್ಲಾ ಒಂದೆ. ಅದಕ್ಕೆ ಜಗವು ಪಾಪ ಪುಣ್ಯವೆಂದು ಮಾತನಾಡುತಿಪ್ಪರು. ಅದೆಂತೆಂದಡೆ: ಶಿವಂಗೆ ತಾಯಿಯಿಲ್ಲ, ಭುವನಕ್ಕೆ ಬೆಲೆಯಿಲ್ಲ. ತರು ಗಿರಿ ಗಹ್ವರಕ್ಕೆ ಮನೆಯಿಲ್ಲ. ಲಿಂಗವನೊಡಗೂಡಿದ ವಿರಕ್ತಂಗೆ ಪುಣ್ಯ ಪಾಪವಿಲ್ಲ ಕಾಣಾ ಚೆನ್ನಮಲ್ಲಿಕಾರ್ಜುನಾ.