ವಚನ - 52     
 
ಆಕಾರವಲ್ಲದ ನಿರಾಕಾರ ಲಿಂಗವ ಕೈಯಲ್ಲಿ ಹಿಡಿದು ಕಟ್ಟಿದೆವೆಂಬರು ಅಜ್ಞಾನಿ ಜೀವಿಗಳು. ಹರಿಬ್ರಹ್ಮರು ವೇದ ಪುರಾಣ ಆಗಮಂಗಳು ಅರಸಿ ಕಾಣದ ಲಿಂಗ. ಭಕ್ತಿಗೆ ಫಲವಲ್ಲದೆ ಲಿಂಗವಿಲ್ಲ. ಕರ್ಮಕ್ಕೆ ನರಕವಲ್ಲದೆ ಲಿಂಗವಿಲ್ಲ. ಜ್ಞಾನಕ್ಕೆ ಪರಿಭ್ರಮಣವಲ್ಲದೆ ಲಿಂಗವಿಲ್ಲ. ವೈರಾಗ್ಯಕ್ಕೆ ಮುಕ್ತಿಯಲ್ಲದೆ ಲಿಂಗವಿಲ್ಲ. ಇದು ಕಾರಣ ತನ್ನ ತಾನರಿದು ತಾನಾದಡೆ ಚೆನ್ನಮಲ್ಲಿಕಾರ್ಜುನ ತಾನೆ ಬೇರಿಲ್ಲ.