Index   ವಚನ - 39    Search  
 
ಲೋಕಾದಿ ಲೋಕಂಗಳೇನುಯೇನೂ ಇಲ್ಲದಂದು `ಏಕಮೇವಪರಬ್ರಹ್ಮವು' ತಾನೊಂದೇ ನೋಡಾ! ಅದು ತನ್ನನು ನೆನೆಯದೆ, ಇದಿರನು ನೆನೆಯದೆ ನೆನಹು ನಿಷ್ಪತ್ತಿಯಾಗಿದ್ದಿತು ನೋಡಾ. ಆ ನೆನಹಿಲ್ಲದ ಘನವಸ್ತು ನೆನೆದ ನೆನಹೆ ಸಾವಯವಾಗಿ ಚಿತ್ತೆನಿಸಿಕೊಂಡಿತ್ತು. ಆ ಚಿತ್ತೇ, ಸತ್ತು, ಚಿತ್ತು, ಆನಂದ, ನಿತ್ಯ, ಪರಿಪೂರ್ಣ ಎಂಬ ಐದಂಗವನಂಗೀಕರಿಸಿ, ನಿಃಕಲ ಶಿವತತ್ವವೆನಿಸಿತ್ತು ನೋಡಾ. ಆ ನಿಃಕಲ ಶಿವತತ್ವ ತಾನೊಂದೆ, ತನ್ನ ಶಕ್ತಿಯ ಚಲನೆ ಮಾತ್ರದಿಂದ ಒಂದೆರಡಾಯಿತ್ತು ನೋಡಾ. ಅದರೊಳಗೆ ಒಂದು ಲಿಂಗಸ್ಥಲ, ಮತ್ತೊಂದು ಅಂಗಸ್ಥಲ. ಹೀಂಗೆ ಅಂಗ ಲಿಂಗವೆಂದು, ಉಪಾಸ್ಯ ಉಪಾಸಕನೆಂದು, ವರ್ತಿಸುತ್ತಿಹುದು ನೋಡಾ. ಆ ಪರಶಿವನ ಚಿಚ್ಛಕ್ತಿ ತಾನೆ ಎರಡು ತೆರನಾಯಿತ್ತು. ಲಿಂಗಸ್ಥಲವನಾಶ್ರಯಿಸಿ ಶಕ್ತಿಯೆನಿಸಿತ್ತು, ಅಂಗಸ್ಥಲವನಾಶ್ರಯಿಸಿ ಭಕ್ತಿಯೆನಿಸಿತ್ತು. ಶಕ್ತಿಯೆ ಪ್ರವೃತ್ತಿಯೆನಿಸಿತ್ತು. ಭಕ್ತಿಯೆ ನಿಷ್ಪತ್ತಿಯೆನಿಸಿತ್ತು. ಶಕ್ತಿ ಭಕ್ತಿಯೆಂದೆರಡು ಪ್ರಕಾರವಾಯಿತ್ತು ಶಿವನ ಶಕ್ತಿ. ಲಿಂಗವಾರು ತೆರನಾಯಿತ್ತು; ಅಂಗವಾರು ತೆರನಾಯಿತ್ತು. ಶಕ್ತಿಯಾರು ತೆರನಾಯಿತ್ತು; ಭಕ್ತಿಯಾರು ತೆರನಾಯಿತ್ತು. ಅದು ಹೇಂಗೆಂದಡೆ; ಮೊದಲಲ್ಲಿ ಲಿಂಗ ಮೂರು ತೆರನಾಯಿತ್ತು. ಅದು ಹೇಂಗೆಂದಡೆ: ಭಾವಲಿಂಗವೆಂದು, ಪ್ರಾಣಲಿಂಗವೆಂದು, ಇಷ್ಟಲಿಂಗವೆಂದು, ಮೂರು ತೆರನಾಯಿತ್ತು. ಆ ಭಾವಲಿಂಗ, ಪ್ರಾಣಲಿಂಗ, ಇಷ್ಟಲಿಂಗವೆಂಬ ಲಿಂಗತ್ರಯವು ಒಂದೊಂದು ಲಿಂಗವೆರಡೆರಡಾಗಿ ಆರು ತೆರನಾಯಿತ್ತು. ಅದು ಹೇಂಗೆಂದಡೆ: ಭಾವಲಿಂಗವು ಮಹಾಲಿಂಗವೆಂದು, ಪ್ರಸಾದಲಿಂಗವೆಂದು ಎರಡು ತೆರನಾಯಿತ್ತು. ಪ್ರಾಣಲಿಂಗವು ಜಂಗಮಲಿಂಗವೆಂದು, ಶಿವಲಿಂಗವೆಂದು ಎರಡು ತೆರನಾಯಿತ್ತು. ಇಷ್ಟಲಿಂಗವು ಗುರುಲಿಂಗವೆಂದು, ಆಚಾರಲಿಂಗವೆಂದು ಎರಡು ತೆರನಾಯಿತ್ತು. ಹೀಂಗೆ ಒಬ್ಬ ಶಿವನು ಆರು ತೆರನಾದನು. ಶಾಂತ್ಯತೀತೋತ್ತರೆಯೆಂಬ ಕಲಾಪರಿಯಾಯವನುಳ್ಳ ಚಿಚ್ಛಕ್ತಿ, ಶಾಂತ್ಯತೀತೆಯೆಂಬ ಕಲಾಪರಿಯಾಯವನುಳ್ಳ ಪರಾಶಕ್ತಿ, ಶಾಂತಿಯೆಂಬ ಕಲಾಪರಿಯವನುಳ್ಳ ಆದಿಶಕ್ತಿ, ವಿದ್ಯಾ ಕಲಾಪರಿಯಾಯವನುಳ್ಳ ಇಚ್ಛಾಶಕ್ತಿ, ಪ್ರತಿಷ್ಠಾ ಕಲಾಪರಿಯಾಯವನುಳ್ಳ ಕ್ರಿಯಾಶಕ್ತಿ. ನಿವೃತ್ತಿ ಕಲಾಪರಿಯಾಯವನುಳ್ಳ ಜ್ಞಾನಶಕ್ತಿ, ಹೀಂಗೆ ಒಂದೇ ಶಿವಶಕ್ತಿ ಆರು ತೆರನಾಗಿ, ಷಟ್ ಪ್ರಕಾರವಹಂಥಾ ಲಿಂಗಕ್ಕೆ ಅಂಗರೂಪಾಯಿತ್ತು. ಇದು ಲಿಂಗಷಟ್ ಸ್ಥಲ. ಇನ್ನು ಒಂದು ಅಂಗ ಮೂರು ತೆರನಾಯಿತ್ತು. ಅದು ಹೇಂಗೆಂದಡೆ: ಯೋಗಾಂಗ, ಭೋಗಾಂಗ, ತ್ಯಾಗಾಂಗವೆಂದು ಮೂರು ಪ್ರಕಾರವಾಯಿತ್ತು. ಈ ತ್ರಯಾಂಗ ಒಂದೊಂದು ಎರಡೆರಡಾಗಿ, ಆರು ತೆರನಾಯಿತ್ತು. ಅದು ಹೇಂಗೆಂದೆಡೆ: ಯೋಗಾಂಗವೆ ಐಕ್ಯನೆಂದು, ಶರಣನೆಂದು ಎರಡು ತೆರನಾಯಿತ್ತು. ಭೋಗಾಂಗವೆ ಪ್ರಾಣಲಿಂಗಿಯೆಂದು, ಪ್ರಸಾದಿಯೆಂದು ಎರಡು ತೆರನಾಯಿತ್ತು. ತ್ಯಾಗಾಂಗವೆ ಮಾಹೇಶ್ವರನೆಂದು, ಭಕ್ತನೆಂದು ಎರಡು ತೆರನಾಯಿತ್ತು. ಹೀಂಗೆ ಒಬ್ಬ ಶಿವಶರಣನು ಆರು ತೆರನಾದನು. ಸಮರಸ ಭಕ್ತಿ, ಆನಂದ ಭಕ್ತಿ, ಅನುಭಾವ ಭಕ್ತಿ, ಅವಧಾನ ಭಕ್ತಿ, ನೈಷ್ಠಿಕಾ ಭಕ್ತಿ, ಸದ್ಭಕ್ತಿ ಎಂದು ಮಹಾಘನ ಅನುಪಮಭಕ್ತಿ ತಾನೆ ಆರು ತೆರನಾಗಿ, ಷಟ್ ಪ್ರಕಾರವಹಂಥ ಶರಣಂಗೆ ಅಂಗರೂಪವಾಯಿತ್ತು. ಇದು ಅಂಗಷಟ್ ಸ್ಥಲ. ಇನ್ನು ಕ್ರಿಯಾಶಕ್ತಿಯಿಂದ ನಿವೃತ್ತಿಕಲೆ- ಆ ನಿವೃತ್ತಿ ಕಲೆಯ ಸಂಕಲ್ಪಮಾತ್ರದಿಂದ ಮಾಯಾಶಕ್ತಿ ಹುಟ್ಟಿದಳು. ಆ ಮಾಯಾಶಕ್ತಿಯಿಂದ ಸಮಸ್ತ ಜಗತ್ತಿನ ಉತ್ಪತ್ತಿ. ಅಂಗವೆಂದಡೆ ಶರಣ; ಲಿಂಗವೆಂದಡೆ ಶಿವ. ಆ ಶರಣಂಗೆ ಆ ಲಿಂಗವು ಆವಾಗವು ಪ್ರಾಣವು. ಆ ಲಿಂಗಕ್ಕೆ ಆ ಶರಣ ಆವಾಗವು ಅಂಗವು. ಈ ಶರಣ ಲಿಂಗವೆರಡಕ್ಕೂ ಬೀಜವೃಕ್ಷನ್ಯಾಯದ ಹಾಂಗೆ ಅಲ್ಲದೆ, ಭಿನ್ನವಿಲ್ಲ. ಇದು ಕಾರಣ, ಅನಾದಿಯಿಂದವು ಶರಣನೆಂದಡೆ ಲಿಂಗ, ಲಿಂಗವೆಂದೆಡೆ ಶರಣ, ಈ ಶರಣ ಲಿಂಗವೆರಡಕ್ಕೂ ಭೇದವಿಲ್ಲವೆಂಬುದನು ಸ್ವಾನುಭಾವವಿವೇಕದಿಂದ ಅರಿದುದು ಅರುಹಲ್ಲದೆ, ಆಗಮಯುಕ್ತಿಯಿಂದ ಅರಿದುದು ಅರುಹಲ್ಲ. ಅದೇನು ಕಾರಣವೆಂದಡೆ; ಶಾಸ್ತ್ರಜ್ಞಾನದಿಂದ ಸಂಕಲ್ಪ ಹಿಂಗದಾಗಿ. ಈ ಷಟ್ಸ್ಥಲಮಾರ್ಗವು ದ್ವೈತಾದ್ವೈತದ ಪರಿವರ್ತನೆಯಲ್ಲ. ಅದೇನು ಕಾರಣವೆಂದಡೆ; ಇದು ಶಿವಾದ್ವೈತಮಾರ್ಗವಾದ ಕಾರಣ. ಈ ಲಿಂಗಾಂಗಸಂಬಂಧ ಸಮರಸೈಕ್ಯವ ತಿಳಿದ ಬಳಿಕ ಬೊಮ್ಮ, ಪರಬೊಮ್ಮವೆಂದು ಬೇರುಂಟೆ ತಾನಲ್ಲದೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.