ತನುವನು ಶ್ರೀಗುರುವು ಕ್ರಿಯಾ ದೀಕ್ಷೆಯಿಂದ
ತನುಗುಣವನು ಭಸ್ಮೀಕೃತವ ಮಾಡಿದ ಬಳಿಕ,
ಅದು ದೃಶ್ಯ ಜಡ ತನುವಲ್ಲ.
ಶಿವಸತ್ಕ್ರಿಯಾಚಾರದ ಮೂಲಸೂತ್ರವೆ ತನ್ನ ತನುವೆಂದರಿವುದು.
ಶ್ರೀಗುರು ಮಂತ್ರ ದೀಕ್ಷೆಯಿಂದ ಮನದ ಪೂರ್ವಾಶ್ರಯವ ಕಳೆದು
ಮನಕ್ಕೆ ಘನ ನೆನಹ ಸಂಬಂಧಿಸಿದನಾಗಿ, ಮನ ನಿರ್ಮಲವಾಗಿ
ಲಿಂಗಕ್ಕಾಶ್ರಯವೆಂದು ಅರಿವುದು.
ಶ್ರೀಗುರು ಜ್ಞಾನದೀಕ್ಷೆಯಿಂದ ಪ್ರಾಣನ ಪ್ರಪಂಚಿನ ಪಶುಭಾವವ ಕಳೆದು
ಅಖಂಡಿತ ಜ್ಞಾನ ಲಿಂಗಕಳೆಯ ತನ್ನ ಪ್ರಾಣನಾಥನೆಂದು ತಿಳುಹಿದನಾಗಿ,
ಪ್ರಾಣನ ಮಲಿನವೆಂಬುದು ಪಶುಭಾವವಲ್ಲದೆ ಲಿಂಗಭಾವವಲ್ಲ.
ಈ ಸಂದೇಹ ಭ್ರಾಂತಿಯುಳ್ಳ ಕಾರಣ, ಶೈವ ಹೊಲ್ಲ ಎನ್ನುತ್ತಿರ್ದೆನಯ್ಯ.
ತಮ್ಮ ತಾವರಿದು ನಿಶ್ಚೈಸದಿರ್ದಡೆ ಮಾಣಲಿ,
ಗುರೂಪದೇಶದಿಂದ ನಿಶ್ಚೈಸುವುದು. ಇದು ಸಂದೇಹವಿಲ್ಲ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.