Index   ವಚನ - 175    Search  
 
ಈ ಪ್ರಕಾರದಲ್ಲಿ ಗುರುವಿನ ಹಸ್ತದಲ್ಲಿ ಹುಟ್ಟಿ ಲಿಂಗದೇಹಿಯೆನಿಸಿಕೊಂಡ ಜ್ಞಾನಿಪುರುಷನು ತನ್ನ ಜ್ಞಾನಸ್ವರೂಪವನರಿಯಬೇಕಯ್ಯ. ಆ ಜ್ಞಾನವೇ ಆರು ತೆರನಾಗಿಪ್ಪುದು. ಅವಾವವೆಂದಡೆ: ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗವೆಂದು ಇಂತೀ ಆರು ತೆರನಾಗಿಪ್ಪುದು. ಈ ಷಡ್ವಿಧ ವ್ರತವನರಿದು ಆಚರಿಸುವ ಕ್ರಮವೆಂತುಟಯ್ಯಯೆಂದಡೆ: ಆಧಾರ ಚಕ್ರಸ್ಥಾನದಲ್ಲಿ ನಾಲ್ಕೆಸಳ ಕಮಲದ ವ ಶ ಷ ಸಯೆಂಬ ನಾಲ್ಕು ಬೀಜಾಕ್ಷರದ ಪೃಥ್ವಿತತ್ವದ ಕೆಂಪುವರ್ಣದ ನೆಲೆಯನರಿಯಬೇಕಯ್ಯ. ಸ್ವಾಧಿಷ್ಠಾನ ಚಕ್ರದಲ್ಲಿ ಆರೆಸಳ ಕಮಲದ ಬ ಭ ಮ ಯ ರ ಲಯೆಂಬ ಆರು ಬೀಜಾಕ್ಷರ ಯುಕ್ತವಾದ ಅಪ್ಪುತತ್ವದ ನೀಲವರ್ಣದ ನೆಲೆಯನರಿಯಬೇಕಯ್ಯ. ಮಣಿಪೂರಕ ಚಕ್ರಸ್ಥಾನದಲ್ಲಿ ಹತ್ತೆಸಳ ಕಮಲದ ಡ ಢ ಣ ತ ಥ ದ ಧ ನ ಪ ಫ ಯೆಂಬ ಹತ್ತು ಬೀಜಾಕ್ಷರ ಸ್ವಾಯತವಾಗಿಪ್ಪ ಅಗ್ನಿತತ್ವದ ಕುಂಕುಮವರ್ಣದ ನೆಲೆಯನರಿಯಬೇಕಯ್ಯ. ಅನಾಹತ ಚಕ್ರಸ್ಥಾನದಲ್ಲಿ ಹನ್ನೆರಡೆಸಳ ಕಮಲದ ಕ ಖ ಗ ಘ ಙ ಚ ಛ ಜ ಝ ಞ ಟ ಠಯೆಂಬ ಹನ್ನೆರಡು ಬೀಜಾಕ್ಷರಯುಕ್ತವಾಗಿರ್ಪ ವಾಯುತತ್ವದ ಶ್ವೇತವರ್ಣದ ನೆಲೆಯನರಿಯಬೇಕಯ್ಯ. ವಿಶುದ್ಧಿ ಚಕ್ರಸ್ಥಾನದಲ್ಲಿ ಹದಿನಾರೆಸಳ ಕಮಲದ ಅ ಆ ಇ ಈ ಉ ಊ ಋ ಋೂ ಎ ಏ ಐ ಒ ಓ ಔ ಅಂ ಅಃ ಎಂಬ ಹದಿನಾರು ಬೀಜಾಕ್ಷರ ಸ್ವಾಯತವಾಗಿಪ್ಪ ಆಕಾಶತತ್ವದ ಸ್ಫಟಿಕವರ್ಣದ ನೆಲೆಯನರಿಯಬೇಕಯ್ಯ. ಆಜ್ಞಾಚಕ್ರಸ್ಥಾನದಲ್ಲಿ ಎರಡೆಸಳ ಕಮಲದ ಹಂ ಸ ಯೆಂಬ ಎರಡು ಬೀಜಾಕ್ಷರಯುಕ್ತವಾಗಿಪ್ಪ ಆತ್ಮತತ್ವದ ಮಾಣಿಕ್ಯ ವರ್ಣದ ನೆಲೆಯನರಿಯಬೇಕಯ್ಯ. ಇವೆಲ್ಲವಕ್ಕೂ ಮೇಲಣತತ್ವವೆನಿಸುವ ಬ್ರಹ್ಮರಂದ್ರದಲ್ಲಿ ಸಾವಿರೆಸಳ ಕಮಲದ, ಸಾವಿರ ಬೀಜಾಕ್ಷರ ಸರ್ವತೋಮುಖವಾಗಿಪ್ಪ ಭೇದವನರಿಯಬೇಕಯ್ಯ. ಇನ್ನೀ ಚಕ್ರಂಗಳಿಗೆ ಲಿಂಗಸ್ವಾಯತಯುಕ್ತವಾಗಿಪ್ಪ ಭೇದವ ಹೇಳಿಹೆನು: ಆಧಾರಚಕ್ರದ ನಾಲ್ಕೆಸಳ ಕಮಲದ ಮಧ್ಯದಲ್ಲಿ ಆಚಾರಲಿಂಗವ ಸ್ವಾಯತವ ಮಾಡಿ ಸ್ವಾಧಿಷ್ಠಾನ ಚಕ್ರದ ಆರೆಸಳ ಕಮಲದ ಮಧ್ಯದಲ್ಲಿ ಗುರುಲಿಂಗವ ಮೂರ್ತಿಗೊಳಿಸಿ ಮಣಿಪೂರಕ ಚಕ್ರದ ಹತ್ತೆಸಳ ಕಮಲದ ಮಧ್ಯದಲ್ಲಿ ಶಿವಲಿಂಗವ ಸಂಬಂಧಿಸಿ ಅನಾಹತ ಚಕ್ರದ ಹನ್ನೆರಡೆಸಳ ಕಮಲದ ಮಧ್ಯದಲ್ಲಿ ಜಂಗಮಲಿಂಗವ ನೆಲೆಗೊಳಿಸಿ ವಿಶುದ್ಧಿಚಕ್ರದ ಹದಿನಾರೆಸಳ ಕಮಲದ ಮಧ್ಯದಲ್ಲಿ ಪ್ರಸಾದಲಿಂಗವ ಮೂರ್ತಿಗೊಳಿಸಿ ಆಜ್ಞಾಚಕ್ರದ ಎರಡೆಸಳ ಕಮಲದ ಮಧ್ಯದಲ್ಲಿ ಮಹಾಲಿಂಗವ ನೆಲೆಗೊಳಿಸಿ ಪ್ರಾಣದಲ್ಲಿ ಆಚಾರಲಿಂಗವ ಸಂಬಂಧಿಸಿ ಜಿಹ್ವೆಯಲ್ಲಿ ಗುರುಲಿಂಗವ ಸ್ವಾಯತವಮಾಡಿ ನೇತ್ರದಲ್ಲಿ ಶಿವಲಿಂಗವ ಮೂರ್ತಿಗೊಳಿಸಿ ತ್ವಕ್ಕಿನಲ್ಲಿ ಜಂಗಮಲಿಂಗವ ನೆಲೆಗೊಳಿಸಿ ಶ್ರೋತ್ರದಲ್ಲಿ ಪ್ರಸಾದಲಿಂಗವ ಸಂಬಂಧಿಸಿ ಭಾವದಲ್ಲಿ ಮಹಾಲಿಂಗವ ನೆಲೆಗೊಳಿಸಿ ಬ್ರಹ್ಮರಂಧ್ರದಲ್ಲಿರ್ಪ ಪರಿಪೂರ್ಣಲಿಂಗವು ಸರ್ವಾಂಗದಲ್ಲಿಯು ಸ್ವಾಯತವಾಗಲು ಅಂಗಸಂಗಗಳೆಲ್ಲವು ಲಿಂಗಸಂಗಗಳಾಗಿ ಲಿಂಗ ದೃಕ್ಕೇ ನಿರಂತರ ಪ್ರಕಾಶಿಸುತಿಪ್ಪುದಯ್ಯ. ಲಿಂಗಪ್ರಭೆಯೊಳಗೆ ಶಿವಶಿವಾಯೆನುತಿರ್ದೆನಯ್ಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.