Index   ವಚನ - 361    Search  
 
ಆಶಾಪಾಶವೆಂಬ ಆಧಿವ್ಯಾದಿ ಅಂಡಲೆವುತ್ತಿಪ್ಪವು ನೋಡಾ. ದೋಷ ದುರ್ಗುಣವೆಂಬ ದುರಿತ ದುಃಖ ಪೀಡಿಸುತಿಪ್ಪವು ನೋಡಾ. ಸಕಲ ಕರಣಂಗಳೆಂಬ ಖಾಸದ ವ್ಯಾಧಿ ಹಿಡಿದು ಕಳವಳಿಸುತಿಪ್ಪವು ನೋಡಾ. ಈಶ್ವರೋವಾಚವ ನುಡಿದುಕೊಂಡು ನಡೆವರೆ ನಾಚದ ಪಾಷಂಡಿ ವೇಷಧಾರಿ ಪಶುಗಳು, ಪ್ರಾಣಲಿಂಗ ಸಂಬಂಧದ ಯೋಗವನಿವರೆತ್ತ ಬಲ್ಲರು? ತಮ್ಮಂಗದಮೇಲೆ ಲಿಂಗವಿದ್ದು ಅನ್ಯಮತನಾಚರಿಸುವ ಕುನ್ನಿಗಳಿಗೆ ಪ್ರಾಣಲಿಂಗ ಸಂಬಂಧವೆಲ್ಲಿಯದೋ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.