Index   ವಚನ - 457    Search  
 
ಬ್ರಹ್ಮಪದವ ಪಡೆದೆನೆಂಬುದು ಭ್ರಮೆ ಕಾಣಿರೋ. ವಿಷ್ಣುಪದವ ಪಡೆದೆನೆಂಬುದು ತೃಷೆಕಾಣಿರೋ. ಇಂದ್ರಪದವ ಪಡೆದೆನೆಂಬುದು ಬಂಧನ ಕಾಣಿರೆಲವೋ ಮರುಳು ಮಾನವರಿರಾ. ದೇವಾತಾದಿ ಭೋಗಂಗಳ ಪಡೆದಿಹೆನೆಂದು ಪರಿಣಾಮಿಸುವ ಗಾವಿಲರನೇನೆಂಬೆನಯ್ಯ? ದನುಜಪದ ನಿತ್ಯವೆಂಬ ಮನುಜರ ಮರುಳತನವ ನೋಡಾ. ಬ್ರಹ್ಮವಿಷ್ಣು ಇಂದ್ರಾದಿಗಳಿಗೊಡೆಯನಾದ ರುದ್ರನ ಪದವ ಪಡೆದೆನೆಂಬುದು- ಅದು ಅಂತಿರಲಿ. ಅದೇನು ಕಾರಣವೆಂದರೆ: ಇವೆಲ್ಲವೂ ಅನಿತ್ಯ ಪದವಾದ ಕಾರಣ. ಇವೆಲ್ಲ ಪದಂಗಳಿಗೂ ಮೇಲಾದ ಮಹಾಲಿಂಗ ಪದವೇ ನಿತ್ಯತ್ವ ಪದ. ಆ ಮಹಾಲಿಂಗ ಪದದೊಳಗೆ ಸಂಯೋಗವಾದ ಘನಲಿಂಗ ಪದಸ್ಥ ಶರಣನು ತನಗನ್ಯವಾಗಿ ಒಂದು ವಸ್ತುವ ಬಲ್ಲನೇ ಅನನ್ಯ ಶರಣನು? ಇದು ಕಾರಣ, ತನುವ ಬಳಲಿಸಿ ತಪವಮಾಡಿ ಫಲಪದವ ಪಡೆದು ಭೋಗಿಸಿಹೆನೆಂಬವರ ವಿಧಿಯೆಲ್ಲ ಹಂದಿ ತಪವ ಮಾಡಿ ಹಾಳು[ಗೇರಿ]ಯ ಹಡೆದಂತಾಯಿತ್ತು ಕಾಣಾ. ಶಿವಪದವಲ್ಲದೆ ಉಳಿದ ಪದವೆಲ್ಲಾ ಹುಸಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.