ಆದಿ ಪರಶಿವ ಬಿಂದುವಿನಿಂದ ಮಾದೇವಿ ಹುಟ್ಟಿ
ತ್ರೈಜಗದ ಜನನಿ ನೋಡಾ.
ಆಕೆ ಜಾತಿ ವರ್ಣಾಶ್ರಮ ಕುಲ ಗೋತ್ರ
ನಾಮ ಸೀಮೆಯ ಕೂಡಿಕೊಂಡಿಪ್ಪ ಭ್ರಾಂತು ಲಕ್ಷಣೆ ನೋಡಾ.
ಆಕೆಯ ಬಲೆಯಲ್ಲಿ ಲೋಕಾಧಿಲೋಕಂಗಳೆಲ್ಲವೂ ಸಿಕ್ಕಿ, ಏಕಾಗಿ,
ಆಕೆಯ ಒಡನೆ ಹುಟ್ಟಿ ಒಡನೆ ಬೆಳೆದು
ಆಕೆಯ ಒಡನೆ ಲಯವಾಗುತಿಪ್ಪವು.
ಆಕೆ ಉಂಟಾಗಿ ಲೋಕಾಧಿಲೋಕಂಗಳ ತೋರಿಕೆ.
ಆಕೆ ಲಯವಾದಲ್ಲಿಯೆ
ಲೋಕಾಧಿಲೋಕಂಗಳೆಲ್ಲವು ಲಯ ನೋಡಾ.
ಆಕೆಯ ಕೈ ಕಾಲ ಕಡಿದು, ಮೊಲೆ ಮೂಗನುತ್ತರಿಸಿ
ಆಕೆಯ ವಿಕಾರಸಂಗವನಳಿದು ಆದಿ ಪರಶಿವಬಿಂದುವನೆಯ್ದಬಲ್ಲರೆ
ಆತನು ಲೋಕಾಧಿಲೋಕಂಗಳ ಪ್ರಪಂಚುವ ಗೆಲಿದ
ನಿಃಪ್ರಪಂಚಿ ಮಾಹೇಶ್ವರನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.