ಕೆರೆಯೊಡೆದ ಬಳಿಕ ತೂಬು ತಡೆಯಬಲ್ಲುದೇ?
ಒಡೆದ ಮಡಕೆಗೆ ಒತ್ತುಮಣ್ಣಕೊಟ್ಟರೆ ನಿಲಬಲ್ಲುದೇ ಅಯ್ಯ?
ಮುತ್ತೊಡೆದರೆ ಹತ್ತಬಲ್ಲುದೇ?
ಸುರಚಾಪ ನಿರ್ಧರವಾಗಬಲ್ಲುದೇ ಅಯ್ಯ?
ಚಿತ್ತವೊಡೆದರೆ ಭಕ್ತಿ ನೆಲೆಗೊಳ್ಳದು.
ಭಕ್ತಿ ಬೀಸರವಾದರೆ, ಮುಕ್ತಿಯೆಂಬುದು ಎಂದಿಗೂ ಇಲ್ಲ ಕಾಣ.
ಇದು ಕಾರಣ,ಚಿತ್ತ ಲಿಂಗವನಪ್ಪಿ ಒಡೆಯದೆ,
ಭಕ್ತಿ ಬೀಸರವೊಗದೆ,
ನಿಮ್ಮ ಕೂಡಿ, ನಿತ್ಯ ನಿರ್ಮುಕ್ತನಾದೆನು ಕಾಣಾ.
ಎಲ್ಲರ ಪರಿಯಲ್ಲ, ಎನ್ನ ಪರಿ ಬೇರೆ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.