Index   ವಚನ - 10    Search  
 
ಕುಂಭಿನಿಯ ಚಕ್ರದ ಮೇಲೆ ಪಿಂಡಬ್ರಹ್ಮಾಂಡವೆಂಬುದೊಂದು ಅಂಗ. ಆ ಅಂಗಾಲಯದೊಳಗೆ ಏಕಸಹಸ್ರವೆಂಬುದೊಂದು ದೇವಾಲಯ. ಆ ದೇವಾಲಯಕ್ಕೆ ವೆಜ್ಜವಿಲ್ಲದ ಬಾಗಿಲು. ಆ ಬಾಗಿಲ ಮೇಲುಪ್ಪರಿಗೆಯೊಳಗೊಂದು ಮೂಲಾಧಾರ ಮುಕ್ತಿಯೆಂಬುದೊಂದು ಕೋಣೆ. ಅದಾರಿಗೂ ಮುಟ್ಟಬಾರದು, ನೆನೆಯಬಾರದು. ನೋಡಬಾರದ ಕೋಣೆಯೊಳಗೆ ಮಾಣಿಕ್ಯದ ಮಹಾಪ್ರಕಾಶಕ್ಕೆ ಮಿಗಿಲೆನಿಪ ನುಡಿಗೆಡೆಯಿಲ್ಲದ ಲಿಂಗ. ಮುಕ್ತಿಯೆಂಬ ಕೋಣೆಯ ಮೂಲಾಗ್ರದಲ್ಲಿ ಇಪ್ಪುದೊಂದು [ಪರಂಜ್ಯೋತಿ]. ಆ ಮೂಲಾಗ್ರದ ಮೇಲಣ ಪರಂಜ್ಯೋತಿ ಪ್ರಕಾಶಪರಿಪೂರ್ಣಲಿಂಗವ ತಿಳಿಯಬಲ್ಲಡೆ ಮುಟ್ಟಲಾಗದು ಮೂರ, ಕಟ್ಟಲಾಗದು ಆರ. ಈ ಕಷ್ಟವ ಕಳೆಯದನ್ನಕ್ಕ ಕಂಡೆಹೆನೆಂಬವರನೇನೆಂಬೆ. ರುದ್ರ ತಪಸ್ಸಿನೊಳಗಾದ, ಬ್ರಹ್ಮ ನಿತ್ಯಕ್ಕೊಳಗಾದ. ವಿಷ್ಣು ಕಾಮದ ಬಲೆಯಲ್ಲಿ ಸಿಲ್ಕಿದ. ಇನ್ನು ದೇವದಾನವ ಮಾನವರೆಲ್ಲರೂ ಅನಂತಾನುಕೋಟಿ ಭವಭವಪಾಶವೆಂಬ ರಾಟಾಳದ ಬಲೆಯಲ್ಲಿ ಉರುಳಾಡುತ್ತಿಪ್ಪರಯ್ಯ. ಇಂತು ಮೂಲದ ಕೀಲ ಸಂಹರಿಸಿ ನಿಂದ ನಿಸ್ಸೀಮ ಶರಣರೇ ಬಲ್ಲರಲ್ಲದೆ ಮತ್ತಾರೂ ಅರಿಯರಯ್ಯ. ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವ.