Index   ವಚನ - 180    Search  
 
ಒಂದು ಬೀಜವ ಬಿತ್ತಿದಡೆ ಮೂರು ಫಲವಾಯಿತ್ತು. ಆ ಫಲ ಬಲಿದು ಬೆಳೆದ ಮತ್ತೆ, ಒಂದ ಉದಯದಲ್ಲಿ ಕೊಯ್ದೆ, ಒಂದ ಮಧ್ಯಾಹ್ನದಲ್ಲಿ ಕೊಯ್ದೆ, ಒಂದ ಹೊತ್ತು ಸಂದ ಮತ್ತೆ ಕೊಯ್ದೆ. ಈ ಮೂರರೆಯನೊಂದು ಮಾಡಿ ಮೆಟ್ಟಿಸಿದೆ. ಭಕ್ತಿಜ್ಞಾನವೈರಾಗ್ಯವೆಂಬ ಎತ್ತಿನ ಕೈಯಲ್ಲಿ ತೂರಿದೆ ಕೊಂಗವನೆತ್ತಿ ಅಂಗವೆಂಬ ಹೊಳ್ಳು ಹಾರಿತ್ತು. ಸಂಸಾರವೆಂಬ ಚೊಳ್ಳು ನಿತ್ಯಾನಿತ್ಯ ವಿವೇಕವೆಂಬ ಕೊಳಗವ ಹಿಡಿದಳೆಯಲಾಗಿ, ನೂರೊಂದು ಕೊಳಗವಾಯಿತ್ತು. ಹೆಡಗೆಗೆ ಅಳವಡಿಸುವಾಗ ಐವತ್ತೊಂದು ಕೊಳಗವಾಯಿತ್ತು. ನಡುಮನೆಯಲ್ಲಿ ಸುರಿವಾಗ ಇಪ್ಪತ್ತೈದು ಕೊಳಗವಾಯಿತ್ತು. ಪಡುವಣಕೋಣೆಯಲ್ಲಿ ಮಡಗಿರಿಸುವಾಗ, ಪಡಿಯ ನೋಡಲಾಗಿ ಐಗಳವಾಯಿತ್ತು. ಅದು ಬಿಡುಬಿಸಿಲಿನಲ್ಲಿ ಒಣಗೆ, ಅದು ಪಡಿಪುಚ್ಚಕ್ಕೆ ಮೂಗಳವಾಯಿತ್ತು. ಆ ಮೂಗಳವ ನಡುಮೊರದಲ್ಲಿ ಸುರಿಯೆ, ಪಡಿಗಣಿಸುವಾಗ ಒಕ್ಕುಳವಾಯಿತ್ತು. ಈ ಒಕ್ಕುಳವ ಕುಟ್ಟಿ, ಮಿಕ್ಕುದ ಕೇರೆ ಮತ್ತೆ ಒಬ್ಬಳವಾಯಿತ್ತು. ಒಬ್ಬಳವ ಕುಡಿಕೆಯಲ್ಲಿ ಹೊಯ್ದು ನಿರುತದಿಂ ನೋಡೆ, ಮೂರು ಮಾನವ ನುಂಗಿ, ಒಂದು ಮಾನವಾಯಿತ್ತು. ಒಂದು ಮಾನವನಟ್ಟು ಕುಡಿಕೆಯಲ್ಲಿ ಕುಸುರೆ ಕೂಳೊಡೆದು ಬಾಲಗೋಗರವಾಯಿತ್ತು. ಉಂಡವರತ್ತ, ನಾನಿತ್ತ ನಿಃಕಳಂಕ ಮಲ್ಲಿಕಾರ್ಜುನಾ.