Index   ವಚನ - 438    Search  
 
ನಾನೆಂಬುದನರಿದಲ್ಲಿಯೆ ಅರಿವನೊಳಕೊಂಡುದು. ಆ ಅರಿವು ಐಕ್ಯವಾದಲ್ಲಿಯೆ ಗುರುವ ಭಾವಿಸಲಿಲ್ಲ. ಆ ಗುರು ಐಕ್ಯವಾದಲ್ಲಿಯೆ ಲಿಂಗವನರಿದುದು. ಆ ಜಂಗಮ ಐಕ್ಯವಾದಲ್ಲಿಯೆ ತ್ರಿವಿಧವ ಮರೆದುದು. ಆ ಲಿಂಗ ಐಕ್ಯವಾದಲ್ಲಿಯೆ ಜಂಗಮವ ಮರೆದುದು. ತ್ರಿವಿಧವ ಮರೆದಲ್ಲಿಯೆ ತನ್ನ ಮರೆದುದು. ತನ್ನ ಮರೆದಲ್ಲಿಯೆ ಇದಿರಿಟ್ಟುದನರಿದುದು. ಮತ್ತೆ ಅರಿದು ಮರೆಯಲಿಲ್ಲ, ಮರೆದು ಅರಿಯಲಿಲ್ಲ. ತೆರಹಿಲ್ಲವಾಗಿ ಭಾವಿಸಿ ಕಂಡೆಹೆನೆಂಬ ಭ್ರಮೆಯೆಲ್ಲಿಯದೊ ? ಪೂಜಿಸಿ ಕಂಡೆಹೆನೆಂಬ ಕ್ರೀ ಎಲ್ಲಿಯದೊ ? ಹೂಬಲಿದು ಕಾಯಾಗಬೇಕಲ್ಲದೆ ಕಾಯಿ ಬಲಿದು ಹೂವಾಗಬಲ್ಲುದೆ ? ಹಣ್ಣು ಬಲಿದು ಬಣ್ಣವಹುದಕ್ಕೆ ಮೊದಲೆ, ಕೊಂಬು ಮುರಿಯಿತ್ತು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಐಕ್ಯವಾದ ಶರಣಂಗೆ.