Index   ವಚನ - 440    Search  
 
ನಾ ಬಾಹಾಗ ಎನ್ನ ಗುರು ಮೂರು ರತ್ನವ ಕೊಟ್ಟ. ಅವ ನಾನೊಲ್ಲದೆ ಒಂದ ಬ್ರಹ್ಮಂಗೆ ಕೊಟ್ಟೆ. ಒಂದ ವಿಷ್ಣುವಿಗೆ ಕೊಟ್ಟೆ, ಒಂದ ರುದ್ರಂಗೆ ಕೊಟ್ಟೆ. ಆ ಕೊಟ್ಟುದನು ಬ್ರಹ್ಮ ಬೆಗಡವನಿಕ್ಕಿ ಪವಣಿಸಿ ಕಟ್ಟಿದ. ಅದ ವಿಷ್ಣು ಕುಂದಣದಲ್ಲಿ ಕೀಲಿಸಿ ಮುಂಗೈಯಲ್ಲಿಕ್ಕಿದ. ಮತ್ತೊಂದವನಾ ರುದ್ರನೊಡೆದು ಬೆಳಗ ಬಯಲು ಮಾಡಿದ. ಇಂತೀ ಮೂವರು ರತ್ನದ ಹಂಗಿಗರಾದರು. ಅವರ ಹಂಗನೊಲ್ಲದೆ ಸಂದೇಹ ಬಿಡಲಾರದೆ, ಬಂದ ಬಂದ ಯೋನಿಯಲ್ಲಿ ಸಂದಿಲ್ಲದೆ ತಿರುಗಲಾರದೆ, ನೊಂದೆನಯ್ಯಾ. ಬ್ರಹ್ಮನ ಬಲೆಯಲ್ಲಿ ಸಿಲುಕಿ, ವಿಷ್ಣುವಿನ ಬಂಧನದಲ್ಲಿ ಕಟ್ಟುವಡೆದು, ರುದ್ರನ ಹಣೆಗಿಚ್ಚಿನಲ್ಲಿ ಉರಿಯಲಾರದೆ, ಹಾರಿದೆನಯ್ಯಾ ಕೇಡಿಲ್ಲದ ಪದವ. ಗುರುವಿನ ಹಂಗ ಬಿಟ್ಟೆ, ಅಡಿಗಡಿಗೆ ಏಳಲಾರದೆ. ಲಿಂಗದ ಹಂಗ ಬಿಟ್ಟೆ, ಮಜ್ಜನಕ್ಕೆರೆದ ಹಾವಸೆಗಾರದೆ. ಜಂಗಮದ ಹಂಗ ಬಿಟ್ಟೆ, ಸಂದೇಹದಲ್ಲಿ ಸಾಯಲಾರದೆ. ಇವರಂದ ಒಂದೂ ಚಂದವಿಲ್ಲ. ಅಭಂಗ ನಿರ್ಲೇಪ, ನಿಃಕಳಂಕ ಮಲ್ಲಿಕಾರ್ಜುನಂಗೆ.