Index   ವಚನ - 500    Search  
 
ಪೃಥ್ವಿಯಂಗ ಭಕ್ತನಲ್ಲ, ಅಪ್ಪುವಿನಂಗ ಮಹೇಶ್ವರನಲ್ಲ, ಅಗ್ನಿಯಂಗ ಪ್ರಸಾದಿಯಲ್ಲ, ವಾಯುವಂಗ ಪ್ರಾಣಲಿಂಗಿಯಲ್ಲ, ಆಕಾಶದಂಗ ಶರಣನಲ್ಲ. ಇಂತೀ ಪಂಚತತ್ವವ ಮೆಟ್ಟಿ ನೋಡಿ ಕೂಡಿಹೆನೆಂಬುದು ಐಕ್ಯನಲ್ಲ. ಅದೆಂತೆಂದಡೆ: ಆ ಪೃಥ್ವಿ ಅಪ್ಪುವಿನ ಪ್ರಳಯಕ್ಕೊಳಗು, ಆ ಅಪ್ಪು ಅಗ್ನಿಯ ಆಪೋಶನಕ್ಕೆ ಒಡಲು. ಆ ಅಗ್ನಿ ವಾಯುವಿನ ಭಾವಕ್ಕೊಳಗು, ಆ ವಾಯು ಆಕಾಶದ ಅವಧಿಗೊಡಲು. ಇಂತೀ ಪಂಚತತ್ವಂಗಳಲ್ಲಿ ಬೆರಸಿ, ಕೂಡಿಹೆನೆಂಬ ಷಟ್ಸ್ಥಲವ ನಾನರಿಯೆ. ಅದು ನಿಮ್ಮ ಭಾವ, ನಿಮ್ಮಲ್ಲಿಯೆ ಆರರ ಹೊಳಹು. ಅದು ನಿಮ್ಮ ಲೀಲಾಭಾವ, ನಿಃಕಳಂಕ ಮಲ್ಲಿಕಾರ್ಜುನಾ.