ಭಕ್ತ ಮಾಹೇಶ್ವರ ಪ್ರಸಾದಿ ಈ ಮೂರು ಭಕ್ತನಂಗ.
ಪ್ರಾಣಲಿಂಗಿ ಶರಣ ಐಕ್ಯ ಈ ಮೂರು ಜಂಗಮದಂಗ.
ಮೂರಕ್ಕಾರು ಸತಿಪತಿಭೇದವನರಿವುದು.
ಆ ಆರರ ಒದಗು ಇಪ್ಪತ್ತೈದರ ಬೀಜ.
ಈ ಭೇದವನರಿದ ಮತ್ತೆ ನೂರೊಂದು ಆರರಲ್ಲಿ ಅಡಗಿ,
ಆ ಆರು ಐದರಲ್ಲಿ ನಿಂದು, ಐದು ಮೂರರಲ್ಲಿ ನಿಂದು ಭೇದಿಸಿ,
ಮೂರು ಒಂದರಲ್ಲಿ ನಿಂದು ಸಂದೇಹವಳಿಯಿತ್ತು.
ಇಂತು ಎನ್ನ ಭ್ರಮೆ ಹಿಂಗಿತ್ತು.
ಇಂತಿವರ ನಾನಾ ಸ್ಥಳ ಕುಳಂಗಳೆಲ್ಲವು ಆದಿಗತೀತವಾದ ಮತ್ತೆ
ಭಾವದ ಗುರುವೆನಲೇಕೆ ? ಅವತಾರದ ಲಿಂಗವೆನಲೇಕೆ ?
ಅರಿದು ಮರೆದವ ಜಂಗಮವೆನಲೇಕೆ ?
ಇಂತಿವ ಕಂಡೂ ಕಾಣದ, ನಂಬಿಯೂ ನಂಬದ ಸಂದೇಹಿಗೇಕೆ,
ಗುರು ಲಿಂಗ ಜಂಗಮ ?
ಪ್ರಥಮ ಕ್ರಿಯೆಯಲ್ಲಿ ಮೋಸ, ಜ್ಞಾನಕ್ಕೆ ಲಾಭವೆ ?
ಇದು ದೃಷ್ಟದ ದರ್ಪಣದ ಒಳಹೊರಗಿನಂತೆ ತಿಳಿದು ನೋಡೆ,
ಉಭಯಸ್ಥಲವೈಕ್ಯ ನಿಃಕಳಂಕ ಮಲ್ಲಿಕಾರ್ಜುನಾ.