Index   ವಚನ - 569    Search  
 
ಭಕ್ತ ಮಾಹೇಶ್ವರಸ್ಥಲ ಏಕವಾದಲ್ಲಿ, ಶಿಲೆ ಬಿಂದುವಿನ ಚಂದ್ರನ ಬಿಂಬದಂತೆ ಇದ್ದಿತ್ತು. ಪ್ರಸಾದಿಯ ಪ್ರಾಣಲಿಂಗಿಯ ಸ್ಥಲ ಏಕವಾದಲ್ಲಿ, ಅರಗಿನ ಪುತ್ಥಳಿಯ ಅವಯವಂಗಳ ಉರಿ ಹರಿದು, ಪರಿಹರಿಸಿದಂತೆ ಇದ್ದಿತ್ತು. ಶರಣನ ಐಕ್ಯಸ್ಥಲದ ಭಾವ ಕರ್ಪುರವ ಅಗ್ನಿ ಆಹುತಿಯ ಕೊಂಡಂತೆ ಇದ್ದಿತ್ತು. ಇಂತೀ ಆರು ಮೂರರಲ್ಲಿ ಅಡಗಿನಿಂದ ಕೂಟಸ್ಥಲ. ಲೆಪ್ಪದ ಮೇಗಣ ಚಿತ್ರದ ದೃಕ್ಕಿನ ದೃಶ್ಯದಂತೆ ಇದ್ದಿತ್ತು. ಇಂತೀ ತ್ರಿವಿಧಸ್ಥಲ ಏಕರೂಪವಾದಲ್ಲಿ, ಆಕಾಶದ ವರ್ಣದ ಬಹುರೂಪ ಗರ್ಭೀಕರಿಸಿದ ನಿರಾಕಾರದಂತೆ ಇದ್ದಿತ್ತು. ನಾಮವಿಲ್ಲದ ರೂಪು, ಭಾವವಿಲ್ಲದ ಮಾತು, ನೀ ನಾನೆಂಬ ಸ್ಥಲ ಅದೇನು ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.