Index   ವಚನ - 724    Search  
 
ಸಕಲ ರೂಪೆಂದು, ನಿಃಕಲ ನಿರವಯವೆಂದು ಲಕ್ಷಿಸಿ ನುಡಿವಾಗ, ಸಕಲವನರಿವುದು ನಿಃಕಲವೋ, ಸಕಲವೋ? ಸಕಲವೆ ರೂಪಿಗೊಳಗಾದ ವಸ್ತು, ನಿಃಕಲವೆ ಒಡಲುಗೊಂಡ ವಸ್ತು. ಅದು ಸೂತ್ರದ ನೂಲಿನಂತೆ ಕಡೆಗಾಣಿಸಿ ನಿಂದಲ್ಲಿ, ಬೊಂಬೆಗೆ ಹಾಹೆ ಉಂಟೆ ? ಅಂಗಕ್ಕ ಕರ್ಮವಿಲ್ಲ, ಆತ್ಮಂಗಲ್ಲದೆ. ಈ ದ್ವಂದ್ವದ ಸುಸಂಗದಲ್ಲಿ ನಿಂದು ನೋಡಲಾಗಿ, ಅಂಗ ನಿರಂಗವೆಂಬುದು ಅಲ್ಲಿಯೆ ಅಡಗಿತ್ತು. ಅದೇ ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.