Index   ವಚನ - 725    Search  
 
ಸಕಲ ಸುಖಭೋಗಂಗಳಲ್ಲಿದ್ದೂ ಇಲ್ಲದಾತನ ಆತ್ಮನ ಇರವು ಎಂತುಟೆಂದಡೆ, ನೀರೆಣ್ಣೆಯಂತೆ, ಜಲವಾಳುಕದಂತೆ, ಉದಕ ಕಲ್ಲಿನಂತೆ, ಅಂಬುಜಪತ್ರದ ಬಿಂದುವಿನಂತೆ, ಸಕಲವಿಷಯದಲ್ಲಿ ತನು ನೋಯದೆ, ಮನವಳಿಯದೆ, ಆತ್ಮಬಂಧವಿಲ್ಲದೆ ಅಲೇಪನಾಗಿರಬಲ್ಲಡೆ, ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ. ಇಷ್ಟನರಿಯದೆ ಅಭಿಲಾಷೆಗೆ ಬಂದು ದೀಪದ ಬೆಳಗಿಂಗೆ ಲೇಸೆಂದು ಬೀಳುವ ಕೀಟಕನಂತಾಗದೆ, ಕಾಯಸುಖವ ಮೆಚ್ಚಿ, ಕರ್ಮಕ್ಕೊಳಗಾಗದೆ, ಜೀವ ಸರ್ವೆಂದ್ರಿಯಂಗಳಲ್ಲಿ ಲೋಲಿತನಾಗದೆ, ಬಂಧಮೋಕ್ಷಕರ್ಮಂಗಳ, ಅವು ಬಂದಬಂದ ಠಾವಿನಲ್ಲಿ ಇಂಬಿಟ್ಟು, ಉಭಯದ ಸಂದಳಿಯ ಬಿಟ್ಟು, ಬೇರೊಂದು ಉಭಯ ಬೇರಾಗದೆ ಅದು ಬಿಡುಮುಡಿಯ ಭೇದ. ಒಳಗಡಗಿದಾತನನರಿ, ದೃಷ್ಟದ ಬೇರ ಮುಟ್ಟಬೇಡ. ಮತ್ತರಿತು ಉಭಯವ ಮುಟ್ಟದಿದ್ದಡೆ ಪ್ರಾಣಲಿಂಗಸಂಬಂಧಿ. ಆ ಸಂಬಂಧ ಸಮಯಕ್ಕೆ ಹೊರಗಾದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.