Index   ವಚನ - 812    Search  
 
ಹೊಲ ಬೆಳೆದಲ್ಲಿ ಹುಲ್ಲೆಗಳು ಇರಗುಡವು. ಹುಲ್ಲೆಯ ಹೊಡೆಯಬಾರದು, ಹೊಲನ ಮೇಯಬಾರದು. ಬಿಟ್ಟಡೆ ವರ್ತನಕ್ಕೆ ಭಂಗ, ಹಿಡಿದಡೆ ಜ್ಞಾನಕ್ಕೆ ಭಂಗ. ಇಂತೀ ಸಮಯವ ಜ್ಞಾನದಲ್ಲಿ ತಿಳಿಯಬೇಕಯ್ಯಾ. ಹಾವು ಸಾಯದೆ, ಕೋಲು ಮುರಿಯದೆ, ಹಾವು ಹೋಹ ಪರಿ ಇನ್ನೆಂತಯ್ಯಾ! ಅದು ಗಾರುಡಂಗಲ್ಲದೆ ಗಾವಿಲ[ಗಂಜದು] ಆ ತೆರ ಸ್ವಯಾನುಭಾವಿಗಲ್ಲದೆ ಶ್ವಾನಜ್ಞಾನಿಗುಂಟೆ? ಮುಚ್ಚಿದಲ್ಲಿ ಅರಿದು, ತೆರೆದಲ್ಲಿ ಮರೆದು, ಇಂತೀ ಉಭಯದಲ್ಲಿ ಕುಕ್ಕುಳಗುದಿವವರಿಗುಂಟೆ, ನಿಃಕಳಂಕ ಮಲ್ಲಿಕಾರ್ಜುನನ ಸುಚಿತ್ತದ ಸುಖ?