Index   ವಚನ - 36    Search  
 
ನಿನ್ನ ಸೋದಿಸುವಡೆ ಎನ್ನ ಕೈಯಲ್ಲಿ ಆಗದು. ಎಳ್ಳಿನೊಳಗಣ ಎಣ್ಣೆಯಂತೆ, ಹಣ್ಣಿನೊಳಗಣ ರುಚಿಯಂತೆ, ಹೂವಿನೊಳಗಣ ಸಂಜ್ಞೆಯಂತೆ, ತರುಧರ ಅಗ್ನಿಯ ಕೂಟದಂತೆ, ಕಂಡಡೆ ಕರಗಿ, ಕಾಣದಡೆ ಬಿರುಬಾಗಿ, ಇವರಂಗವ ಕಂಡು ಅಡಗಿದೆಯೆ? ನಿನ್ನ ಸಂಗವನರಿವುದಕ್ಕೆ ಎನ್ನಂಗದ ಇರವಾವುದು? ತನುವ ದಂಡಿಸುವುದಕ್ಕೆ ನೀ ಸರ್ವಮಯ, ನಿನ್ನ ಖಂಡಿಸುವದಕ್ಕೆ ನೀ ಪರಿಪೂರ್ಣ. ಎನ್ನ ಮರೆದು, ನಿನ್ನ ಕಾಬುದಕ್ಕೆ ಒಳಗಿಲ್ಲ. ನಿನ್ನ ಕಾಬುದಕ್ಕೆ ನೀ ಅಲೇಖಮಯ ಅನಂತಶೂನ್ಯ, ಕಲ್ಲಿನ ಮರೆಯಾದೆಯಲ್ಲಾ, ಎಲ್ಲರಿಗೆ ಅಂಜಿ.