Index   ವಚನ - 80    Search  
 
ಹರಿಕುಲದ ವಿಪ್ರರು ಶ್ರೀ ವಿಭೂತಿಯ ಧರಿಸದೆ ಮೋಕ್ಷಮಾರ್ಗಕ್ಕೆ ತಪ್ಪುಗರಾದರು ನೋಡಾ. ಸಕಲವೇದಂಗಳು ಶ್ರೀ ವಿಭೂತಿಯೇ ಘನವೆಂದು ಕರವೆತ್ತಿ ಕೂಗುತಿಪ್ಪುವು ನೋಡಾ. ಸಕಲಶ್ರುತಿಗಳು ಶ್ರೀ ವಿಭೂತಿಯ ಮಹತ್ವವನೆ ಹೊಗಳುತಿಪ್ಪುವು ನೋಡಾ. ಸಕಲಸ್ಮೃತಿಗಳು ಶ್ರೀ ವಿಭೂತಿಯ ಮಹಿಮೆಯನೆ ಉಗ್ಗಡಿಸುತಿಪ್ಪುವು ನೋಡಾ. ಅಖಿಲ ಪುರಾಣಂಗಳು ಶ್ರೀ ವಿಭೂತಿಯೇ ಅಧಿಕವೆಂದು ಹೊಗಳುತಿಪ್ಪುವು ನೋಡಾ. ಅದೆಂತೆಂದೊಡೆ: ಗಾರುಡೇ ಶ್ರುತಯಃ ಸ್ಮೃತಯಃ ಸರ್ವಾಃ ಪುರಾಣಾನ್ಯಖಿಲಾನ್ಯಪಿ | ವದಂತಿ ಭೂತಿಮಹಾತ್ಮ್ಯಂ ತತಸ್ತಾಂ ಧಾರಯೇತ್ ದ್ವಿಜಃ || ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯ ಧರಿಸಲೊಲ್ಲದೆ ಮಣ್ಣು ಮಟ್ಟಿಯ ಹಣೆಗಿಟ್ಟುಕೊಂಬ ಮಧ್ವಮತದ ಚಾಂಡಾಲ ಹೊಲೆಯ ವಿಪ್ರ ಹಾರುವರೆಂಬ ಅಧಮ ಮಾದಿಗರನೆನಗೊಮ್ಮೆ ತೋರದಿರಯ್ಯ ಅಖಂಡೇಶ್ವರಾ.