Index   ವಚನ - 81    Search  
 
ಆವ ಕಾರ್ಯಕ್ಕಾದಡೂ ಶ್ರೀ ವಿಭೂತಿಯೇ ಬೇಕು. ಆವ ಕ್ರಿಯೆಗಾದಡೂ ಶ್ರೀ ವಿಭೂತಿಯೇ ಬೇಕು. ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ವೇದವನೋದಿದಡೇನು? ಆತನೋದಿದ ವೇದಂಗಳು ವ್ಯರ್ಥ ಕಾಣಿರೋ! ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ಯಜ್ಞಂಗಳ ಮಾಡಿದಡೇನು? ಆತ ಮಾಡಿದ ಯಜ್ಞಂಗಳು ವ್ಯರ್ಥ ಕಾಣಿರೋ! ಆವನೊಬ್ಬ ಶ್ರೀವಿಭೂತಿಯ ಧರಿಸದೆ ದಾನಂಗಳ ಮಾಡಿದಡೇನು? ಆತ ಮಾಡಿದ ದಾನಂಗಳು ವ್ಯರ್ಥ ಕಾಣಿರೋ! ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ತಪವ ಮಾಡಿದಡೇನು? ಆತ ಮಾಡಿದ ತಪ ವ್ಯರ್ಥ ಕಾಣಿರೋ! ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ನಿತ್ಯ ನೇಮ ವ್ರತ ಉಪವಾಸಂಗಳಂ ಮಾಡಿದಡೇನು? ಆತ ಮಾಡಿದ ನಿತ್ಯ ನೇಮ ವ್ರತ ಉಪವಾಸಂಗಳು ವ್ಯರ್ಥ ಕಾಣಿರೋ! ಅದೆಂತೆಂದೊಡೆ: ಬೋಧಾಯನ ಸ್ಮೃತೌ- ವೃಥಾ ವೇದಾ ವೃಥಾ ಯಜ್ಞಾ ವೃಥಾ ದಾನಂ ವೃಥಾ ತಪಃ | ವೃಥಾ ವ್ರತೋಪವಾಸೌ ತು ತ್ರಿಪುಂಡ್ರಂ ಯೋ ನ ಧಾರಯೇತ್ ||'' ಎಂದುದಾಗಿ, ಸಕಲಕ್ಕೆ ಶ್ರೀ ವಿಭೂತಿಯೇ ಆಧಾರವಯ್ಯ ಅಖಂಡೇಶ್ವರಾ.