ಸಂಚಲಗುಣವಳಿದು ಶ್ರೀ ವಿಭೂತಿಯ
ಪಂಚಸ್ಥಾನದಲ್ಲಿ ಪಂಚಬ್ರಹ್ಮಮಂತ್ರದಿಂದೆ ಧರಿಸಲು,
ಪಂಚಮಹಾಪಾತಕಂಗಳು ಪಲ್ಲಟವಪ್ಪುವು ನೋಡಾ.
ಸರ್ವಾಂಗವನು ಧೂಳನವ ಮಾಡಲು
ಸರ್ವವ್ಯಾಧಿಗಳು ಪರಿಹರವಪ್ಪುವು ನೋಡಾ.
ಇದು ಕಾರಣ ಇಂತಪ್ಪ ಶ್ರೀ ವಿಭೂತಿಯ
ಲಲಾಟಾದಿ ಮೂವತ್ತೆರಡು ಸ್ಥಾನಗಳಲ್ಲಿ ಧರಿಸಿ,
ನಿತ್ಯ ಲಿಂಗಾರ್ಚನೆಯ ಮಾಡುವಾತ ಸತ್ಯಶಿವನಲ್ಲದೆ
ಬೇರಲ್ಲವಯ್ಯ ಅಖಂಡೇಶ್ವರಾ.