Index   ವಚನ - 259    Search  
 
ಕಾಷ್ಠದಲ್ಲಿ ಅಗ್ನಿ ಉಂಟೆಂದಡೆ, ಆ ಕಾಷ್ಠದ ರೂಪ ಸುಡಲರಿಯದು ನೋಡಾ! ದೇಹಮಧ್ಯದಲ್ಲಿ ಪರವಸ್ತು ಉಂಟೆಂದಡೆ, ಹರಿಯದು ನೋಡಾ ಆ ದೇಹದ ಜಡಭಾವ! ಅದೆಂತೆಂದೊಡೆ: ಕಾಷ್ಠದ ಮಧ್ಯದಲ್ಲಿ ಅಡಗಿರ್ದ ಮಂದಾಗ್ನಿ ಮಥನದಿಂದೆ ಬಹಿಷ್ಕರಿಸಿ ಆ ಕಾಷ್ಠವ ಸುಡುವಂತೆ, ದೇಹದ ಮಧ್ಯದಲ್ಲಿ ಅಡಗಿರ್ದ ಪರವಸ್ತುವನು ಶ್ರೀಗುರುಸ್ವಾಮಿ ತನ್ನ ಕ್ರಿಯಾಶಕ್ತಿಯ ಮಥನದಿಂದೆ ಬಹಿಷ್ಕರಿಸಿ ಬಹಿರಂಗದ ಮೇಲೆ ಇಷ್ಟಲಿಂಗವಾಗಿ ಧರಿಸಲು, ಆ ಲಿಂಗದ ಸತ್‍ಕ್ರಿಯಾ ಪೂಜೆಯಿಂದೆ ಸ್ಥೂಲಾಂಗದ ಕಾಷ್ಠಗುಣಧರ್ಮಂಗಳೆಲ್ಲ ನಷ್ಟವಾಗಿ ಆ ಲಿಂಗದ ಚಿತ್ಕಳೆಯು ಸರ್ವಾಂಗಕ್ಕೆ ವೇಧಿಸಿ ಅಂತರಂಗ ಬಹಿರಂಗವೊಂದಾಗಿ ಆತ್ಮನ ಅಹಂಮಮತೆ ಕೆಟ್ಟು, ಶಿಖಿಕರ್ಪುರ ಸಂಯೋಗದಂತೆ ಪರತತ್ವವನೊಡಗೂಡಿದ ಮಹಾತ್ಮನ ಕಾಯ ನಿರವಯಲಪ್ಪುದಲ್ಲದೆ ಬರಿಯ ಒಣ ವಾಗದ್ವೈತದಿಂದೆ ಅಹಂ ಬ್ರಹ್ಮವೆಂದು ನುಡಿದು ದೇಹ ಪ್ರಾಣಂಗಳ ಪ್ರಕೃತಿವರ್ತನೆಯಲ್ಲಿ ನಡೆದು ನಿತ್ಯರಾದೇವೆಂಬುವರೆಲ್ಲ ಭವಾಂಬುಧಿಯಲ್ಲಿ ಬಿದ್ದು ಮುಳುಗುತ್ತೇಳುತ್ತ ತಡಿಯ ಸೇರಲರಿಯದೆ ಕೆಟ್ಟುಹೋದರು ನೋಡಾ ಅಖಂಡೇಶ್ವರಾ.