Index   ವಚನ - 286    Search  
 
ಆಚಾರಲಿಂಗವಾಗಿ ಬಂದೆನ್ನ ಘ್ರಾಣೇಂದ್ರಿಯವನೊಳಕೊಂಡಿರ್ಪಿರಯ್ಯ ನೀವು. ಗುರುಲಿಂಗವಾಗಿ ಬಂದೆನ್ನ ಜಿಹ್ವೇಂದ್ರಿಯವನೊಳಕೊಂಡಿರ್ಪಿರಯ್ಯ ನೀವು. ಶಿವಲಿಂಗವಾಗಿ ಬಂದೆನ್ನ ನಯನೇಂದ್ರಿಯವನೊಳಕೊಂಡಿರ್ಪಿರಯ್ಯ ನೀವು. ಜಂಗಮಲಿಂಗವಾಗಿ ಬಂದೆನ್ನ ತ್ವಗೀಂದ್ರಿಯವನೊಳಕೊಂಡಿರ್ಪಿರಯ್ಯ ನೀವು. ಪ್ರಸಾದಲಿಂಗವಾಗಿ ಬಂದೆನ್ನ ಶ್ರೋತ್ರೇಂದ್ರಿಯವನೊಳಕೊಂಡಿರ್ಪಿರಯ್ಯ ನೀವು. ಮಹಾಲಿಂಗವಾಗಿ ಬಂದೆನ್ನ ಹೃದಯವನೊಳಕೊಂಡಿರ್ಪಿರಯ್ಯ ನೀವು. ಇಷ್ಟಲಿಂಗವಾಗಿ ಬಂದೆನ್ನ ತನುವನೊಳಕೊಂಡಿರ್ಪಿರಯ್ಯ ನೀವು. ಪ್ರಾಣಲಿಂಗವಾಗಿ ಬಂದೆನ್ನ ಮನವನೊಳಕೊಂಡಿರ್ಪಿರಯ್ಯ ನೀವು. ಭಾವಲಿಂಗವಾಗಿ ಬಂದೆನ್ನ ಆತ್ಮವನೊಳಕೊಂಡಿರ್ಪಿರಯ್ಯ ನೀವು. ಇಂತೆನ್ನ ಸರ್ವೇಂದ್ರಿಯಂಗಳು ನಿಮ್ಮಲ್ಲಿ ಸಮರಸವಾದುದಾಗಿ. ನಾನು ನೀನೆಂಬುದಕ್ಕೆ ಭಿನ್ನವಿಲ್ಲವಯ್ಯ ಅಖಂಡೇಶ್ವರಾ.