ವಿರಕ್ತ ವಿರಕ್ತರೆಂದು ನುಡಿದುಕೊಂಬ ಅಣ್ಣಗಳಿರಾ.
ನಿಮ್ಮ ವಿರಕ್ತಿಯ ಪರಿಯೆಂತುಂಟು ಹೇಳಿರೋ?
ಅರಿಯದಿರ್ದಡೆ ನೀವು ಕೇಳಿರೋ.
ವಿರಕ್ತನಾದ ಬಳಿಕ
ಅಶನ ವ್ಯಸನ ವಿಷಯ ವಿಕಾರಕ್ಕೆ ದೂರನಾಗಿರಬೇಕು.
ವಿರಕ್ತನಾದ ಬಳಿಕ
ತಾ ಮುನ್ನ ಹೇಸಿ ಬಿಟ್ಟ ಹೊನ್ನು ಹೆಣ್ಣು ಮಣ್ಣು
ಮರಳಿ ಮುಟ್ಟದಿರಬೇಕು.
ವಿರಕ್ತನಾದ ಬಳಿಕ ಆಶಾಪಾಶ ತಾಮಸವ ತೊಲಗಿಸಬೇಕು.
ವಿರಕ್ತನಾದ ಬಳಿಕ
ಅಷ್ಟಮದಂಗಳ ಅರಿಷಡ್ವರ್ಗವ ನಷ್ಟಮಾಡಬೇಕು.
ವಿರಕ್ತನಾದ ಬಳಿಕ ಹಮ್ಮು ಬಿಮ್ಮು ಗರ್ವ ಅಹಂಕಾರವ ಕೆಡೆಮೆಟ್ಟಬೇಕು.
ವಿರಕ್ತನಾದ ಬಳಿಕ ಅಂಗ ಮನ ಪ್ರಾಣೇಂದ್ರಿಯಂಗಳಲ್ಲಿ ಮುಸುಕಿದ
ಆಜ್ಞಾನ ಕತ್ತಲೆಯ ಕಳೆಯಬೇಕು.
ವಿರಕ್ತನಾದ ಬಳಿಕ ಸರ್ವಾವಸ್ಥೆಯಲ್ಲಿ ಲಿಂಗವನಪ್ಪಿರಬೇಕು.
ವಿರಕ್ತನಾದ ಬಳಿಕ ಸಂಕಲ್ಪ ವಿಕಲ್ಪವನಳಿದು
ಮನವು ಮಹಾಲಿಂಗದಲ್ಲಿ ನಿಕ್ಷೇಪವಾಗಿರಬೇಕು.
ವಿರಕ್ತನಾದ ಬಳಿಕ ಚಿಂತ ಭ್ರಾಂತುಗಳಳಿದು
ಭಾವ ನಿರ್ಭಾವವಾಗಿ ಮಹಾಬಯಲ ನಿಜವಾಸಿಯಾಗಿರಬೇಕು.
ಇಷ್ಟುಳ್ಳಡೆ ಪರಮವಿರಕ್ತನೆಂಬೆನು,
ಪಾಶವಿರಹಿತನೆಂಬೆನು, ವೀರಮಾಹೇಶ್ವರನೆಂಬೆನು.
ಹೀಂಗಲ್ಲದೆ ಭ್ರಾಂತಿಬುದ್ಧಿಯಿಂದ
ಪರರೊಡವೆ ಪರಸ್ತ್ರೀ ಪರದಾರಗಮನಂಗಳಲ್ಲಿ ಹರಿದಾಡುವ
ಸಂತೆಯ ಸೂಳೆಯ ಮಕ್ಕಳ ವಿರಕ್ತರೆಂದರೆ
ನಗುವರಯ್ಯ ನಿಮ್ಮ ಶರಣರು ಅಖಂಡೇಶ್ವರಾ.