Index   ವಚನ - 332    Search  
 
ಆದಿಯಾಧಾರವಿಲ್ಲದ ಮುನ್ನ, ನಾದ ಬಿಂದು ಕಲೆಗಳಿಲ್ಲದ ಮುನ್ನ, ಭೇದಾಭೇದಂಗಳಿಂದೆ ತೋರುವ ಬ್ರಹ್ಮಾಂಡ ಕೋಟ್ಯಾನುಕೋಟಿಗಳಿಲ್ಲದ ಮುನ್ನ. ಸರ್ವಶೂನ್ಯ ನಿರಾಕಾರವಾದ-ಪರವಸ್ತುವು ಸಾಕಾರವಿಡಿದು ಸರ್ವಲೋಕಂಗಳ ಪಾವನವ ಮಾಡುವ ಪರಮ ಜಂಗಮದಲ್ಲಿ ಹದಿನಾಲ್ಕು ಲೋಕಂಗಳಡಗಿರ್ಪವು ನೋಡಾ. ಅದೆಂತೆಂದೊಡೆ: ಪಾದತಳದಲ್ಲಿ ಅತಳಲೋಕ, ಪಾದೋರ್ಧ್ವದಲ್ಲಿ ವಿತಳಲೋಕ, ಜಂಘೆಯಲ್ಲಿ ಸುತಳಲೋಕ, ಜಾನುವಿನಲ್ಲಿ ಮಹಾತಳಲೋಕ, ಉರುವಿನಲ್ಲಿ ತಳಾತಳಲೋಕ, ಗುಹ್ಯೆಯಲ್ಲಿ ರಸಾತಳಲೋಕ, ಕಟಿಯಲ್ಲಿ ಪಾತಾಳಲೋಕ, ನಾಭಿಯಲ್ಲಿ ಭೂಲೋಕ, ಕುಕ್ಷಿಯಲ್ಲಿ ಭುವರ್ಲೋಕ, ಹೃದಯದಲ್ಲಿ ಸ್ವರ್ಗಲೋಕ, ವಕ್ಷದಲ್ಲಿ ಮಹರ್ಲೋಕ, ಕಂಠದಲ್ಲಿ ಜನರ್ಲೋಕ, ಲಲಾಟದಲ್ಲಿ ತಪರ್ಲೋಕ, ಮೂರ್ಧ್ನಿಯಲ್ಲಿ ಸತ್ಯಲೋಕ. ಇಂತೀ ಈರೇಳುಲೋಕಂಗಳ ತನ್ನೊಳಗಿಂಬಿಟ್ಟುಕೊಂಡು ವಿಶ್ವಪರಿಪೂರ್ಣವಾಗಿ ಭಕ್ತಿಹಿತಾರ್ಥವಾಗಿ ಮರ್ತ್ಯಲೋಕದಲ್ಲಿ ಸುಳಿವ ಕರ್ತೃ ಜಂಗಮದ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.