ಗಂಡಸತ್ತನೆಂದು ಗಂಡನೊಡನೆ ಕೆಂಡವ ಬೀಳುವೆನೆಂದು
ಪುಂಡವೀರಮಾಸ್ತಿ ತಾನು ದಂಡೆಯ ಕಟ್ಟಿಕೊಂಡು
ಖಂಡೆಯವ ಪಿಡಿದು ತಂಡತಂಡದ ಜನರ ಮುಂದೆ
ಮೆರೆದುಕೊಂಡು ಬಂದು,
ಕಿಚ್ಚಿನ ಹೊಂಡವ ಕಂಡು ಹೆದರಿ ಹಿಮ್ಮೆಟ್ಟಿದಡೆ,
ಅವಳಿಗದೇ ಭಂಗವಲ್ಲದೆ ಶೃಂಗಾರ ಮೆರವುದೇ ಅಯ್ಯ?
ಪತಿ ಲಿಂಗ, ಸತಿ ಶರಣ.
ತನ್ನ ಪತಿವ್ರತಾ ಭಾಷೆಯ ನುಡಿದು ನಡೆಯಲ್ಲಿ ತಪ್ಪಿದಡೆ,
ಅವನ ಭಂಗಕ್ಕೆ ತುದಿ ಮೊದಲಿಲ್ಲ ನೋಡಾ
ಅಖಂಡೇಶ್ವರಾ.