Index   ವಚನ - 571    Search  
 
ಎಲೆ ಶಿವನೆ, ನೀನು ಎನ್ನ ಮೆಚ್ಚಿ ಕೈವಿಡಿದ ಕಾರಣ ಎಮ್ಮವರು ಸಕಲಗಣಂಗಳ ಸಾಕ್ಷಿಯಮಾಡಿ ನಿನಗೆ ಎನ್ನ ಮದುವೆಯಮಾಡಿಕೊಟ್ಟರು. ನೀನು ಎನ್ನನಗಲಿದಡೆ ಗುರುದ್ರೋಹಿ. ಆನು ನಿನ್ನನಗಲಿದಡೆ ಸಮಯಕ್ಕೆ ಹೊರಗು. ಅದೆಂತೆಂದೊಡೆ: ಮುನ್ನ ಶ್ರೀಗುರುಸ್ವಾಮಿ ಎನ್ನ ಪ್ರಾಣದೊಳಗೆ ನಿನ್ನ ಪ್ರಾಣವ ಹುದುಗಿಸಿ, ನಿನ್ನ ಪ್ರಾಣದೊಳಗೆ ಎನ್ನ ಪ್ರಾಣವ ಹುದುಗಿಸಿ ಎಂದೆಂದೂ ಅಗಲಬೇಡೆಂದು ನಿರೂಪಿಸಿದನು. ಆ ನಿರೂಪವನು ಮಹಾಪ್ರಸಾದವೆಂದು ಕೈಕೊಂಡ ಬಳಿಕ ನಾವಿಬ್ಬರು ಎಂದೆಂದಿಗೂ ಅಗಲದಿರಬೇಕಯ್ಯಾ ಅಖಂಡೇಶ್ವರಾ.