Index   ವಚನ - 627    Search  
 
ಹಲವು ವೇಷವ ಧರಿಸಿ ಹಲವು ಭಾಷೆಯ ಕಲಿತು ಹಲವು ದೇಶಕ್ಕೆ ಹರಿದಾಡಿದಡೇನು? ಕಾಲಾರಿಯಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ: ತನುವಿನ ಆಶೆಯಾಮಿಷ ಹಿಂಗದಾಗಿ, ಊರಾಶ್ರಯವ ಬಿಟ್ಟು ಕಾಡಾಶ್ರಮ ಗಿರಿಗಂಹರದಲ್ಲಿರ್ದಡೇನು? ಹಗಲು ಕಣ್ಣುಕಾಣದ ಗೂಗೆಯಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ: ಮನದ ಮಾಯವಡಗದಾಗಿ, ಹಸಿವು ತೃಷೆಯ ಬಿಟ್ಟು ಮಾತನಾಡದೆ ಮೌನವಾಗಿರ್ದಡೇನು? ಕಲ್ಲು ಮರ ಮೋಟು ಗುಲ್ಮಂಗಳಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ: ವಿಷಯವ್ಯವಹಾರ ಹಿಂಗದಾಗಿ, ನಿದ್ರೆಯ ತೊರೆದು ಎದ್ದು ಕುಳ್ಳಿರ್ದಡೇನು? ಕಳ್ಳ ಊರಹೊಕ್ಕು ಉಲುಹು ಅಡಗುವನ್ನಬರ ಮರೆಯಲ್ಲಿ ಕುಳಿತಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ. ಅದೇನು ಕಾರಣವೆಂದೊಡೆ: ಅಂತರಂಗದ ಘನಗಂಭೀರ ಮಹಾಬೆಳಗಿನ ಶಿವಸಮಾಧಿಯನರಿಯದ ಕಾರಣ. ಇಂತಪ್ಪ ಹೊರವೇಷದ ಡಂಭಕ ಜೊಳ್ಳುಮನದವರ ವಿರಕ್ತರೆಂದಡೆ ಮಚ್ಚರಯ್ಯ ನಿಮ್ಮ ಶರಣರು ಅಖಂಡೇಶ್ವರಾ.