Index   ವಚನ - 628    Search  
 
ಬಹುಕ್ರಿಯೆಯ ನಟಿಸದೆ, ಬಹುಶಾಸ್ತ್ರಕ್ಕೆ ಮುಖವಾಗದೆ, ಬಹುವ್ಯಾಪಾರದಲ್ಲಿ ತೊಳಲದೆ, ಬಹುಭಾಷಾವಂತನಾಗದೆ, ಹುಸಿ ಕಳವು ಪರದಾರ ಹಿಂಸೆಗೆ ಚಿತ್ತವೆಳಸದೆ, ಸುಖದುಃಖಕ್ಕೆ ಚಿಂತಿಸದೆ, ನಿಂದೆಸ್ತುತಿಗಳಿಗೆ ಹಿಗ್ಗಿಕುಗ್ಗದೆ, ಹಿಂದುಮುಂದನೆಣಿಸದೆ, ಹಿರಿಯತನಕ್ಕೆ ಹೋಗದೆ, ಶಿವಜ್ಞಾನಸಂಪನ್ನನಾಗಿ, ಶಿವಮಂತ್ರಸುಯಿಧಾನಿಯಾಗಿ, ಶಿವಧ್ಯಾನಪರಾಯಣನಾಗಿ, ಏಕಾಂತವಾಸಿಯಾಗಿ, ಭಿಕ್ಷಾಹಾರಿಯಾಗಿ, ಅಂಗ ಮನದಾಸೆಯು ಹಿಂದುಳಿದು, ಲಿಂಗದ ನೆನಹು ಮುಂದುಕೊಂಡು, ಶಿವನಾಣತಿಯಿಂದೆ ಬಂದ ಬಂದ ಪದಾರ್ಥವ ಲಿಂಗಾರ್ಪಿತವ ಮಾಡಿ, ಲಿಂಗದ ನಡೆ, ಲಿಂಗದ ನುಡಿ, ಲಿಂಗದ ನೋಟ ಸರ್ವಾಂಗದಲ್ಲಿ ಭರಿತವಾಗಿ, ಕರ್ಪುರವು ಉರಿಯನಪ್ಪಿ ನಿರ್ವಯಲಾದಂತೆ, ತನುವು ಇಷ್ಟಲಿಂಗವನಪ್ಪಿ ಮನವು ಪ್ರಾಣಲಿಂಗವನಪ್ಪಿ ಭಾವವು ಅಖಂಡ ಬಯಲಬ್ರಹ್ಮವನಪ್ಪಿ ತಾನು ತಾನಾದ ಮಹಾಘನ ಪರಮ ವಿರಕ್ತನ ಶ್ರೀಪಾದಪದ್ಮಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.