Index   ವಚನ - 643    Search  
 
ತನುವಿನ ಕೈಯಲ್ಲಿರ್ದ ಘನಲಿಂಗವನು ಮನೋಮಂಟಪದಲ್ಲಿ ಕುಳ್ಳಿರಿಸಿ ನೆನಹಿನ ಪರಿಣಾಮವ ಕೊಡಬಲ್ಲಾತನೆ ಶರಣನು. ಮತ್ತಾ ಲಿಂಗವನು ಕರ್ಣಮಂಟಪದಲ್ಲಿ ಕುಳ್ಳಿರಿಸಿ ಶಬ್ದ ಪರಿಣಾಮವ ಕೊಡಬಲ್ಲಾತನೆ ಶರಣನು. ಲಿಂಗವನು ಘ್ರಾಣಮಂಟಪದಲ್ಲಿ ಕುಳ್ಳಿರಿಸಿ ಗಂಧಪರಿಣಾಮವ ಕೊಡಬಲ್ಲಾತನೆ ಶರಣನು. ಲಿಂಗವನು ಜಿಹ್ವಾಮಂಟಪದಲ್ಲಿ ಕುಳ್ಳಿರಿಸಿ ರುಚಿಪರಿಣಾಮವ ಕೊಡಬಲ್ಲಾತನೆ ಶರಣನು. ಲಿಂಗವನು ಸರ್ವಾಂಗಮಂಟಪದಲ್ಲಿ ಕುಳ್ಳಿರಿಸಿ ಸರ್ವಪರಿಣಾಮವನು ಕೊಡಬಲ್ಲಾತನೆ ಶರಣನು. ಅಲ್ಲದೆ ಉಳಿದ ಅಂಗವಿಕಾರ ಆತ್ಮಸುಖಿಗಳೆಲ್ಲ ಭವದ ಕುರಿಗಳಯ್ಯಾ ಅಖಂಡೇಶ್ವರಾ.