ರಾಗ ರಚನೆಯ ಬಲ್ಲೆನೆಂಬ
ವ್ಯಂಗಿಮನುಜರಿರಾ, ನೀವು ಕೇಳಿ :
ರಾಗವಾವುದು, ರಚನೆಯಾವುದು ಬಲ್ಲರೆ ನೀವು ಹೇಳಿರೊ,
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ.
ಈ ರಾಗದ್ವೇಷವ ಹಿಡಿದು, ಕೂಗಿಡುವುದೆಲ್ಲವು ರಾಗವೆ?
ವೇದಪುರಾಣಾಗಮಶಾಸ್ತ್ರವನೋದಿ
ಕಂಡವರ ಬೋಧಿಸುವದೆಲ್ಲ ರಚನೆಯೆ?
ಅಲ್ಲ.ಇನ್ನು ರಾಗವಾವುದು ಎಂದರೆ,
ಝೇಂಕಾರದ ಪ್ರಣಮದ ನಾದವನರಿಯಬಲ್ಲರೆ ರಾಗ.
ಇನ್ನು ರಚನೆ ಯಾವುದು ಎಂದರೆ,
ಯೋಗಿ, ಜೋಗಿ, ಶ್ರವಣ, ಸನ್ಯಾಸಿ,
ಕಾಳಾಮುಖಿ, ಪಾಶುಪತ ಷಡುದರ್ಶನಕ್ಕೆ
ಶ್ರುತವ ತೋರಿ ನುಡಿದು, ದೃಷ್ಟವ ತೋರಿ ನಡೆದು,
ಅಲ್ಲದಿರ್ದರೆ ನೀತಿಯ ತೋರಿ ಮರೆವುದೀಗ ರಚನೆ.
ಇದನರಿಯದೆ ನಾನು ರಾಗ ರಚನೆಯ ಬಲ್ಲೆನೆಂದು ನುಡಿವ
ಮೂಗುಹೋದ ಮೂಕೊರೆಯರ ಮೆಚ್ಚುವನೆ,
ನಮ್ಮ ಬಸಪ್ರಿಯ ಕೂಡಲಚೆನ್ನಬಸವಣ್ಣ ?