Index   ವಚನ - 224    Search  
 
ಹರನಲ್ಲದೆ ದೈವವಿಲ್ಲೆಂದು ಶ್ರುತಿ ಸಾರುತಿರ್ದು, ವೇದಂಗಳು ಪೊಗಳುತಿರ್ದು, ನರರು ಸುರರು ಅರಿವಿರ್ದು, ಅರಿಯದೆ, ಹರಿಯು ದೈವ, ಬ್ರಹ್ಮನು ದೈವ, ಸುರಪನು ದೈವ, ಮನುಮುನಿ ತ್ರಿವಿಧ ದೇವರ್ಕಳು ದೈವವೆಂದು, ಚಂದ್ರ, ಸೂರ್ಯರು ದೈವವೆಂದು ಆರಾಧಿಸುವಿರಿ. ಪತಿವ್ರತೆಯಾದವಳಿಗೆ ತನ್ನ ಪುರುಷನ ನೆನೆಹಲ್ಲದೆ, ಅನ್ಯರ ನೆನೆವಳೆ? ವೇಶಿಯಂತೆ ಹಲಬರು ನಂಟರೆ? ಇವರೆಲ್ಲರ ಸಂತವಿಟ್ಟು, ಮತ್ತೆ ಶಿವನೆ ಎಂಬ ಶಿವದ್ರೋಹಿಗಳು ಕೇಳಿರೊ. ಹರಿ ದೈವವೆಂದು ಆರಾಧಿಸುವರೆಲ್ಲ ಮುಡುಹ ಸುಡಿಸಿಕೊಂಡು, ಮುಂದಲೆಯಲ್ಲಿ ಕೆರಹ ಹೊತ್ತರು. ಬ್ರಹ್ಮವೇ ದೈವವೆಂದು ಆರಾಧಿಸುವವರೆಲ್ಲ ಹೆಮ್ಮೆಯ ನುಡಿದು, ಹೋಮವನಿಕ್ಕಿ ಹೋತನ ಕೊಂದು ತಿಂದು, ಪಾತಕಕ್ಕೆ ಒಳಗಾದರು. ಸುರಪ ದೈವವೆಂದು ಆರಾಧಿಸಿದವರೆಲ್ಲ ತಮ್ಮ ಸಿರಿಯಲ್ಲಿ ಹೋಗಿ ಶಿವನಲ್ಲಿಗೆ ಸಲ್ಲದೆ ಹೋದರು. ಮನುಮುನಿದೇವರ್ಕಳು ದೈವವೆಂದು ಆರಾಧಿಸಿದವರೆಲ್ಲ ಹಿಂದುಮುಂದಾಗಿ ಅಡ್ಡಬಿದ್ದು, ಅವರು ಬಂದ ಭವಕ್ಕೆ ಕಡೆ ಇಲ್ಲ. ಇದನ್ನೆಲ್ಲ ಅರಿದು ಮತ್ತೆ ಇವರೇ ದೈವವೆಂದು ಆರಾಧಿಸುವ ವಿವರಗೆಟ್ಟ ಭವಭಾರಿಗಳ ನುಡಿಯ ಕೇಳಲಾಗದು, ಅವರೊಡನೆ ನುಡಿಯಲಾಗದು. ಅವರ ನಡೆಯ ಕಂಡರೆ ಛೀ ಎಂಬರು ನಿಮ್ಮ ಶರಣರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.