Index   ವಚನ - 226    Search  
 
ಹರಿ ಬ್ರಹ್ಮ ಕಾಲ ಕಾಮ ದಕ್ಷಾದಿಗಳ ದೇವರೆಂದು ಗಟ್ಟಿಯತನದೊಳು ಬೊಗಳುವ ಮಿಟ್ಟೆಯಭಂಡರು ನೀವು ಕೇಳಿರೊ. ಅವರ ಹುಟ್ಟನರಿಯಿರಿ, ಹೊಂದನರಿಯಿರಿ. ಅವರ ಹುಟ್ಟು ಕೇಳಿರಣ್ಣಾ! ಏನೇನೂ ಇಲ್ಲದಂದು, ಶೂನ್ಯ ನಿಃಶೂನ್ಯಕ್ಕೆ ನಿಲುಕದ ಘನವು ಕೋಟಿಚಂದ್ರಸೂರ್ಯರ ಬೆಳಗಾಗಿ ಬೆಳಗುತ್ತಿಪ್ಪಲ್ಲಿ, ಓಂಕಾರವೆಂಬ ನಿರಕ್ಷರ ಹುಟ್ಟಿತ್ತು. ಓಂಕಾರದಿಂದ ನಕಾರ, ಮಕಾರ, ಶಿಕಾರ, ವಕಾರ, ಯಕಾರವೆಂಬ ಪಂಚಾಕ್ಷರ ಹುಟ್ಟಿದವು. ಆ ಪಂಚಾಕ್ಷರಿಗೆ ಪರಾಶಕ್ತಿ ರೂಪಾದಳು. ಆ ಪಂಚಾಕ್ಷರಕ್ಕೂ ಪರಾಶಕ್ತಿಗೂ ಇಬ್ಬರಿಗೂ ಸದಾಶಿವನಾದ. ಆ ಸದಾಶಿವಂಗೆ ಜ್ಞಾನಶಕ್ತಿಯಾದಳು. ಆ ಸದಾಶಿವಂಗೆ ಜ್ಞಾನಶಕ್ತಿಯರಿಬ್ಬರಿಗೂ ಶಿವನಾದ. ಆ ಶಿವಂಗೆ ಇಚ್ಛಾಶಕ್ತಿಯಾದಳು. ಆ ಶಿವಂಗೂ ಇಚ್ಛಾಶಕ್ತಿಗೂ ಇಬ್ಬರಿಗೂ ರುದ್ರನಾದ. ಆ ರುದ್ರಂಗೆ ಕ್ರಿಯಾಶಕ್ತಿಯಾದಳು. ಆ ರುದ್ರಂಗೂ ಕ್ರಿಯಾಶಕ್ತಿಗೂ ಇಬ್ಬರಿಗೂ ವಿಷ್ಣುವಾದ. ಆ ವಿಷ್ಣು ಪಡೆದ ಸತಿ ಲಕ್ಷ್ಮೀಯು. ಆ ವಿಷ್ಣುವಿಂಗೂ ಮಹಾಲಕ್ಷ್ಮೀಗೂ ಇವರಿಬ್ಬರಿಗೂ ಬ್ರಹ್ಮನಾದ. ಆ ಬ್ರಹ್ಮಂಗೆ ಸರಸ್ವತಿಯ ಕೊಟ್ಟು, ಬರೆವ ಸೇವೆಯ ಕೊಟ್ಟ. ಬ್ರಹ್ಮಂಗೂ ಸರಸ್ವತಿಗೂ ಇಬ್ಬರಿಗೂ ಮನುಮುನಿದೇವರ್ಕಳಾದರು. ಆ ಮನುಮುನಿದೇವರ್ಕಳಿಗೆ ಸಕಲ ಸಚರಾಚರವಾಯಿತ್ತು . ಇಹಲೋಕಕ್ಕೆ ನರರು ಆಗಬೇಕೆಂದು ಬ್ರಹ್ಮನು ಹೋಗಿ, ಹರನಿಗೆ ಬಿನ್ನಹಂ ಮಾಡಲು, ಹರನು ಪರಮಜ್ಞಾನದಿಂದ ನೋಡಿ, ತನ್ನ ಶರೀರದಿಂದಲೆ ನಾಲ್ಕು ಜಾತಿಯ ಪುಟ್ಟಿಸಿ ಇಹಲೋಕಕ್ಕೆ ಕಳುಹಿಸಿದನು. ಆ ಶಿವನ ಶರೀರದಲ್ಲಿ ಪುಟ್ಟಿದವರು ಶಿವನನ್ನೇ ಅರ್ಚಿಸಿ, ಶಿವನನ್ನೇ ಪೂಜಿಸಿ, ಶಿವನನ್ನೇ ಭಾವಿಸಿ, ಶಿವನೊಳಗಾದರು. ಅದರಿಂದಾದ ಭವಬಾಧೆಗಳು ತಾವು ತಮ್ಮ ಹುಟ್ಟನರಿಯದೆ, ಹುಟ್ಟಿಸುವಾತ ಬ್ರಹ್ಮ, ರಕ್ಷಿಸುವಾತ ವಿಷ್ಣು, ಶಿಕ್ಷಿಸುವಾತ ರುದ್ರನೆಂದು ಹೇಳಿದರು. ಈ ಭ್ರಷ್ಟರ ಮಾತ ಕೇಳಿ ಕೆಟ್ಟಿತ್ತು ಜಗವೆಲ್ಲ. ಆಗ ಶಿವನು ಕೊಟ್ಟು ಕಳುಹಿದ ಮಾಯೆಗೆ ಮರವೆಂಬ ಪಾಶ. ಅವಳು ಕಟ್ಟಿ ಕೆಡಹಿದಳು ಮೂರುಜಗವೆಲ್ಲವನು. ಇವಳ ಕಟ್ಟಿಗೊಳಗಾದ ಭ್ರಷ್ಟರೆತ್ತಬಲ್ಲರೋ ನಿಮ್ಮ ಶರಣರ ಸುದ್ದಿಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?