Index   ವಚನ - 44    Search  
 
ಕೇಳಿರೆ ಕೇಳಿರೆ ಶಿವವಚನ, ಗುರುವಚನ. ಪುರಾತರ ವಚನಾನುಭವ ಕೇಳಿ ಬದುಕಿರಯ್ಯಾ. ಕೇಳಿದ ಸದ್ಭಕ್ತರೆಲ್ಲರು ಕೃತಾರ್ಥರಪ್ಪರು. ತನು ಕರಗಿ, ಮನ ಕೊರಗಿ, ಭಾವ ಬೆಚ್ಚದೊ! ಅಹಂಕಾರವಳಿದು, ಶರಣರ ಅನುಭಾವವ ಕೇಳಿದಡೆ, ಅದೇ ಮುಕ್ತಿ ನೋಡಿರೆ, ಇಂತಲ್ಲದೆ ಮನೋವ್ಯಾಕುಲನಾಗಿ, ತನುಮುಟ್ಟಿ ಕೇಳಿದಡೆ, ಉಪದೇಶವೆಂತು ಸಲುವುದಯ್ಯಾ? ಒಮ್ಮೆ ಅಭಿಮುಖರಾಗಿ, ಒಮ್ಮೆ ಪರಾಙ್ಮುಖರಾಗಿ ಕೇಳಲು, ಎಂತಳವಡುವುದಯ್ಯಾ? ಮಹಾಲಿಂಗ ಕಲ್ಲೇಶ್ವರಾ, ಗುರುವಚನ ಪರಾಙ್ಮುಖಂಗೆ ಎಂದೆಂದೂ ಭವ ಹಿಂಗದು ನೋಡಾ.