Index   ವಚನ - 46    Search  
 
ಕ್ಷೇತ್ರ ವಿಶೇಷವೊ, ಬೀಜವಿಶೇಷವೊ? ಬಲ್ಲವರು ನೀವು ಹೇಳಿರೆ! ಬೀಜವಿಶೇಷವೆಂದಡೆ ಕುಲದಲಧಿಕ ಸದ್ಬ್ರಾಹ್ಮಣನ ಸತಿ ಜಾರೆಯಾಗಿ, ಶ್ವಪಚನ ರಮಿಸಲು. ಆ ಬೀಜ ಗರ್ಭವಾಗಿ ಜನಿಸಿದ ಸುತಂಗೆ ಬ್ರಾಹ್ಮಣ ಕರ್ಮದಿಂದ ಉಪನಯನ, ಬ್ರಹ್ಮಚರ್ಯ, ವೇದಾಧ್ಯಯನ, ಅಗ್ನಿ ಹೋತ್ರ, ಯಜ್ಞಯಜನಕ್ಕೆ ಯೋಗ್ಯವಾಗನೆ ಆ ಸುತನು? ಕುಲದಲಧಿಕ ಬ್ರಾಹ್ಮಣನು ಚಂಡಾಲ ಸತಿಯ ರಮಿಸಲು, ಜನಿಸಿದ ಸುತಂಗೆ ವಿಪ್ರಕರ್ಮ ಸಲ್ಲದೆ ಹೋಗದೆ? ಇದು ದೃಷ್ಟ. ಇದನತಿಗಳೆದ ವೇದಾದಿ ವಿದ್ಯಂಗಳ ಬಲ್ಲ ಲೌಕಿಕ ವಿದ್ವಾಂಸರು ತಿಳಿದುನೋಡಿ ಹೇಳಿರೆ! ಶ್ರುತಿ: ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ | ವೇದಾಧ್ಯಾಯೀ ಭವೇದ್ವಿಪ್ರಃ ಬ್ರಹ್ಮ ಚರತೇತಿ ಬ್ರಾಹ್ಮಣಃ | ವರ್ಣೇನ ಜಾಯತೇ ಶೂದ್ರಃ ಸ್ತ್ರೀ ಶುದ್ರಾಶ್ಚ ಕಾರಣಾತ್ | ಉತ್ಪತ್ತಿ ಶೂದ್ರ ಪುತ್ರಶ್ಚ ವಿಪ್ರಶೂದ್ರಂ ನ ಭುಂಯೇತ್ || ಇಂತೆಂದುದಾಗಿ, ಇದು ಕಾರಣ, ಗುರು ಸದ್ಭಾವದಲುದಯಿಸಿದ ಶಿವಜ್ಞಾನಬೀಜ ಸದ್ಭಕ್ತಿಯನಿಂಬುಗೊಂಡ ಶಿಷ್ಯನ ಹೃದಯ ಮನ ಕರಣವೆಂಬ ಸುಕ್ಷೇತ್ರವು ಕುಲಹೀನ ಸ್ತ್ರೀ, ಕುಲಯುಕ್ತ ಪುರುಷ, ಕುಲಹೀನ ಪುರುಷ ಕುಲಯುಕ್ತ ಸ್ತ್ರೀಯರ ದೋಷಪಿಂಡದಂತಲ್ಲ. ಎನ್ನ ಮಹಾಲಿಂಗ ಕಲ್ಲೇಶ್ವರನ ಶರಣರೆ ಅಜಾತರೆಂದಿಕ್ಕಿದೆ ಮುಂಡಿಗೆಯನಾ, ಪರವೆತ್ತಿಕೊಳ್ಳಿರೆ.