ಓಂಕಾರದ ಪ್ರಣಮದ ಮೂಲದಿಂದ ವಸ್ತು ನಿರಾಳ ಪುಟ್ಟಿತು.
ನಕಾರದ ಪ್ರಣಮದ ಮೂಲದಿಂದ ನಾದಬ್ರಹ್ಮದಲ್ಲಿ
ಆದಿಯಾಧಾರ ಪುಟ್ಟಿತ್ತು.
ಮಕರದ ಪ್ರಣಯದ ಮೂಲದಿಂದ
ವಿಶ್ವತೋಮಯ ವಿಶ್ವತೋಬಾಹು ವಿಶ್ವತೋಚಕ್ಷು ಪುಟ್ಟಿತ್ತು.
ಶಿಕಾರದ ಪ್ರಣಮದ ಮೂಲದಿಂದ
ಶಿಕ್ಷಾ ದೀಕ್ಷ ಮೋಕ್ಷಕ್ಕೆ ರುದ್ರವಂಶ ಪುಟ್ಟಿತ್ತು.
ವಕಾರದ ಪ್ರಣಮದ ಮೂಲದಿಂದ ವಿಷ್ಣುಸ್ಥಿತಿ ಪುಟ್ಟಿತ್ತು.
ಯಕಾರದ ಪ್ರಣಮದ ಮೂಲದಿಂದ
ಯಥೋ ಬ್ರಹ್ಮ ತಥೋ ಉತ್ಪತ್ತಿ ಪುಟ್ಟಿತ್ತು.
ಸಹಕಾರ್ಯ ಷಡಕ್ಷರದ ಪ್ರಣಮದ ಮೂಲದಿಂದ
ಸಮಸ್ತ ವಿಸ್ತೀರ್ಣ ಸಂಪೂರ್ಣವಾಯಿತು.
ಅಕಾಲ ಕಾಲಪರಿವರ್ತನೆಯಲ್ಲಿ ಸದ್ಭಕ್ತ ಸಮಯ
ಅಸಂಖ್ಯಾತರು ಪುಟ್ಟಿದರು.
ಅಸಂಖ್ಯಾತರಿಗಾಗಿ ಮೇಘಂಗಳಲ್ಲಿ ಜಲ ಉದ್ಭವಿಸಿತ್ತು.
ಆ ಕಾರ್ಯ ಕಾರಣಕ್ಕಾಗಿ ಅನುಭವಕ್ಕಾಗಿ
ಆದಿಯಲ್ಲಿ ಒಬ್ಬ ಶರಣ ಅನ್ನ ನಿಷಿದ್ಧಿಯಾಗಿದ್ದ
ಆತ್ಮಂಗೆ ಆತ್ಮಕ್ಷುಪ್ತಿಯಾಯಿತ್ತು.
ಆ ಕ್ಷುಪ್ತಿಗಾಗಿ ಸಜೀವ ಭಕ್ತರಿಗೆ ನಿರ್ಜಿವ ಭಕ್ತರು
ತೃಪ್ತಿಗೆ ಆಹಾರವಾದರು.
ಆ ಕಾಲ ಈ ಕಾಲ ಆತನೆ ಅನಾಚಾರಿ,
ಆತನೆ ಸದಾಚಾರಿ ಆತನೆ ಶಿವಾಚಾರಿ.
ಆ ಕಾಲ ಸದ್ಭಕ್ತರು ಭಿನ್ನ ರುಚಿಗಾಗಿ
ಸಪ್ತ ಸಮುಂದ್ರಂಗಳು ಉದಯಂಗೈದವು.
ಆಕಾರ ಭಕ್ತ ನಿರಾಕಾರ ತೃಪ್ತ ಏಕೈಕ್ಯವಾಯಿತ್ತು.
ಆ ಭಕ್ತನ ಬಿಡುಮುಂಡೆ ಜಟಾ ಮುಗುಟಕ್ಕೆ
ನಕ್ಷತ್ರ ಪೂಮಾಲೆಯಾಯಿತ್ತು.
ಆ ಭಕ್ತನು ನೋಡುವ ನೇತ್ರ ಚಂದ್ರ ಸೂರ್ಯರಾದರು.
ಆ ಭಕ್ತನ ನಡೆಪಾದ ತಳವಿಧಿಯ(ಜಳನಿಧಿಯ?)
ಹೆಪ್ಪಿನಲ್ಲಿ ಪೃಥ್ವಿಯಾಯಿತ್ತು.
ಆ ಭಕ್ತನ ಒಡಲೆಂಬುದೆ ಮರ್ತ್ಯ, ಶಿರಸ್ಸುವೆ ಸ್ವರ್ಗ,
ಆ ಭಕ್ತನ ಕಟಿಸೂತ್ರದಿಂದ ಗಂಗಾ ಸ್ಥಾನಂಗಳಾದವು,
ಆ ಭಕ್ತನ ನುಡಿಯ ಪರುಷದಿಂದ ತೆತ್ತೀಸಕೋಟಿ
ದೇವರ್ಕಳು ಉದಯಂಗೈದರು.
ಆ ಭಕ್ತನ ಕೊಡುವೆಡಗೆ ಕೊಂಬೆಡಗೆ ಅಸಂಖ್ಯಾತ.
ಗಣಾದಿ ಗಣಂಗಳು ಸಮ್ಮೋಹಿಯಾದರು.
ಆ ಭಕ್ತನ ಸಡಗರ ಸಕಲ ಅನುಭವಕ್ಕಾಗಿ ಸಚರಾಚರವಾಯಿತ್ತು.
ಆ ಭಕ್ತನ ಒಡನಾಡಿ ಶಕ್ತಿ ಗಾಯಿತ್ರಿಯ ಮೂಲದಲ್ಲಿ
ಎಂಬತ್ನಾಲ್ಕು ಲಕ್ಷ ಆಶ್ರಮಂಗಳು ಪುಟ್ಟಿದವು.
ಆ ಭಕ್ತನ ಷಡಾಧಾರ ಷಡುದರುಶನ ಷಡುಚಕ್ರ
ಷಡುಸ್ಥಲ ಬ್ರಹ್ಮ ಆ ಭಕ್ತನೆ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.