Index   ವಚನ - 150    Search  
 
ಪಂಚತತ್ವ ಬಾಹ್ಯಕ್ಕೆ ಇಳಿದು ನಿರ್ಣಯವ ಕೇಳಿರಯ್ಯ: ಅದು ಎಂತೆಂದರೆ- ಸ್ಥೂಲ ಸೂಕ್ಷದಲ್ಲಿ ತಿಳಿದು ನೋಡಬೇಕು. ಪೃಥ್ವಿಗೆ ತನುವಿದ್ದ ಕಾರಣ ಬಂಧನಕ್ಕೆ ಬಂದಿತ್ತು. ಉದಕಕ್ಕೆ ತನುವಿದ್ದ ಕಾರಣ ಅಳಲಿ ಬಳಲುತ್ತಿದ್ದಿತ್ತು. ಅಗ್ನಿಗೆ ತನುವಿದ್ದ ಕಾರಣ ನಿರ್ಬಂಧನಕ್ಕೊಳಗಾಗುತ್ತಿದ್ದಿತ್ತು. ವಾಯುವಿಗೆ ತನುವಿದ್ದ ಕಾರಣ ತೊಳಲಿ ಬಳಲುತ್ತಿದ್ದಿತ್ತು. ಆಕಾಶಕ್ಕೆ ತನುವಿದ್ದ ಕಾರಣ ರೂಪವಾಗಿ ಕಾಣಿಸಿ ಕರಗುತ್ತಿದ್ದಿತ್ತು. ಪೃಥ್ವಿಯ ತನುವು ಅಗ್ನಿಯಲ್ಲಳಿಯಿತು, ಅಗ್ನಿಯ ತನುವು ವಾಯುವಿನಲ್ಲಳಿಯಿತು, ವಾಯುವಿನ ತನುವು ಆಕಾಶದಲ್ಲಳಿಯಿತು, ಈ ಪ್ರಕಾರದಲ್ಲಿ ಒಂದರಿಂದ ಒಂದು ಅಡಗಿತ್ತು. ಪೃಥ್ವಿ ಅಗ್ನಿಯೊಳಡಗಿತ್ತು. ಅಗ್ನಿ ವಾಯುವಿನಲ್ಲಡಗಿತ್ತು ವಾಯು ಆಕಾಶದಲ್ಲಡಗಿತ್ತು. ಆಕಾಶ ನಿಶ್ಯೂನ್ಯದಲ್ಲಡಗಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.