[ಪ್ರಾಣಲಿಂಗಸಂಬಂಧಿಗಳು] ಪ್ರಾಣಲಿಂಗಸಂಬಂಧಿಗಳು ಎಂಬ
ಅಣ್ಣಗಳಿರಾ ಕೇಳಿರಿ:
ಪ್ರಾಣಲಿಂಗಸಂಬಂಧಿಗಳಾದರೆ
ಇಷ್ಟಲಿಂಗವ ಹಿಡಿದು ಪೂಜೆಯ ಮಾಡಲ್ಯಾತಕ್ಕೆ?
ಪ್ರಾಣಲಿಂಗಸಂಬಂಧಿಗಳಾದರೆ
ತಮ್ಮ ಮನೆಯಲ್ಲಿ ಶಿಲೆಯ ರೂಪವ ಮಾಡಿ ಜಗುಲಿಯ ಮೇಲಿಟ್ಟು
ಪೂಜೆಯ ಮಾಡಲ್ಯಾತಕ್ಕೆ?
ಪ್ರಾಣಲಿಂಗಸಂಬಂಧಿಗಳಾದರೆ
ಊರಮುಂದೆ ದೇವರೆಂದು ಹೋಗಿ ಎರಗಲ್ಯಾತಕ್ಕೆ?
ಪ್ರಾಣಲಿಂಗಸಂಬಂಧಿಗಳಾದರೆ ತೀರ್ಥಕ್ಷೇತ್ರಕ್ಕೆ ಹೋಗಲ್ಯಾತಕ್ಕೆ?
ಪ್ರಾಣಲಿಂಗಸಂಬಂಧಿಗಳಾದರೆ ಪರ್ವತಕ್ಕೆ ಹೋಗಿ
ಅಡ್ಡಬೀಳಲ್ಯಾತಕ್ಕೆ?
ಅವರನೆಂತು ನಾ ಪ್ರಾಣಲಿಂಗಸಂಬಂಧಿಗಳೆಂಬೆ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.