ಅಂತಪ್ಪ ಅವರಿಗೆ ಮುಂತು ಆರು ದರುಶನದ ತಪ್ಪು ಬಂತು.
ಸಂತತ ಯೋಗತ್ವ ಎಂದ ಸಿದ್ಧರಾಮಯ್ಯಗೆ ತಪ್ಪು ಬಂತು.
ಪಂಥವಿಡಿದ ಗೋರಕ್ಷೆಗೆ ಕಾಯಸಿದ್ಧಿಯ ತಪ್ಪು ಬಂತು.
ಅಂತು ಶ್ರವಣ ಆದಿಮಯ್ಯಗೆ ನಿರ್ವಾಣತ್ವದ ತಪ್ಪು ಬಂತು.
ಪಂಥ ಪರಾಕ್ರಮಿ ಹನುಮಾಗೆ
ಸನ್ಯಾಸಿ ವಾದದ ತಪ್ಪು ಬಂತು.
ಮಂತ್ರವಿಧಿಯ ಗೆಲ್ವರೆ ಎಂತೆಂದು ಶುಕದೇವಗೆ ತಪ್ಪು ಬಂತು.
ತಂತ್ರವು ನಂದೀಶ್ವರನ ಮೇಲೆ ಮಾಯದ ಕೊಲೆ ಬಂತು.
ಇಂತಪ್ಪ ಆರು ಮಂದಿ ಆರೂಢರಿಗೆ ಆಜ್ಞೆ ಬಂತು.
ಮಂತ್ರ[ವು] ಪಿಂಡವಾಗಿ ಜನಿಸಿ ಮರ್ತ್ಯದೊಳು
ಮಾಯಾಂಗನೆಗೆ ಸುಖವಾಯಿತ್ತು.
ಮುಂತು ಪುರಾತರು ಗಣಸಹಿತ ಆನಂದ ವಿನೋದದಲ್ಲಿ
ಅಂತು ಕೈಲಾಸಕ್ಕೆ ಬಹುದು ಎಂದ ಕಳುಹಿದರು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.