Index   ವಚನ - 237    Search  
 
ಇದಿರಿಟ್ಟು ತೋರಿದ ಭಕ್ತಸ್ಥಲವ; ಅದಕ್ಕಾಗಿ ಭವಕ್ಕೆ ಬರಬೇಕಾಯಿತು. ಮೃದವೆಂದು ತೋರಿದ ಮಹೇಶ್ವರ[ಸ್ಥಲವ]; ಅದಕ್ಕಾಗಿ ಭವಕ್ಕೆ ಬರಬೇಕಾಯಿತು. ಪದರದಿ ತೋರಿದ ಪ್ರಸಾದಿಸ್ಥಲವ; ಅದಕಾಗಿ ಭವಕ್ಕೆ ಬರಬೇಕಾಯಿತು, ಸದಮದ ತೋರಿದ ಶರಣಸ್ಥಲವ; ಅದಕಾಗಿ ಭವಕ್ಕೆ ಬರಬೇಕಾಯಿತು. ಹೃದಯದಿ ತೋರಿದ ಪ್ರಾಣಲಿಂಗಿಸ್ಥಲವ; ಅದಕಾಗಿ ಭವಕ್ಕೆ ಬರಬೇಕಾಯಿತು. ಇದಿರೊಳಿಟ್ಟು, ತನ್ನೊಳಿಟ್ಟು, ಈ ಪರಿ ತೊಳಲುತ, ತೊಳಲು ಅಳಿಯುವುದು, ಆತಾಗಿ ಆತಂಗೆ ಸಾಧ್ಯವಲ್ಲದೆ ಮಿಕ್ಕಾದವರಿಗೆ ಅಸಾಧ್ಯ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.