ತತ್ವದ ತಿತ್ತಿಯೊಳು ನೀರು ಅರತು,
ತನ್ನೊಳು ತಾನು ಅವಿಯಾಗಿ ಅಲಂಕಾರಕ್ಕೆ ಸಿಕ್ಕದಿದ್ದುದೆ ಆದಿ.
ತತ್ವದ ತತ್ತಿ ಹುದುಗಿ, ಭಕ್ತಿಯೆಂಬ ನೀರು ತುಂಬಿ
ಬಯಲು ಬಯಲಿನ ಅಲಂಕಾರಕೆ ಅಂಕುರವಾದುದೆ ಅನಾದಿ.
ಇಂತೀ ಆದಿ ಅನಾದಿಯ, ಅಧ್ಯಾತ್ಮನ ಅತ್ಮದಲ್ಲಿ
ಅಂತರಾತ್ಮದಲ್ಲಿ ಇದ್ದವರು ಬಲ್ಲರಲ್ಲದೆ ಇಲ್ಲದವರೇನು ಬಲ್ಲರೊ?
ಸುದ್ದಿ ಕೇಳುವರೆ, ಊರ ಬಲ್ಲಾತ ದರಿಯ ಬಲ್ಲ.
ಓದಿದರೇನು, ಕಲಿತಷ್ಟು; ಹೇಳಿದರೇನು, ಕೇಳಿದಷ್ಟು.
ಹೇಳಿಕೆಗೆ ಕೇಳಿಕೆಗೆ ಆಗುವುದೆ? ಆಳಿನೊಡೆಯ
ಹೇಳಿಕಳುಹಿದಷ್ಟು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.