ಅಚ್ಚಭವಿತನದಿಂದ ನಿಚ್ಚನರಕಕ್ಕಿಳಿವ
ಕರ್ಮಚಾಂಡಾಲವಿಪ್ರರು ನೀವು ಕೇಳಿರೇ!
ಈಶಭಕ್ತರ ಕಂಡು ದೂಷಿಸಿ ನರಕಕ್ಕಿಳಿವ
ಶಾಪಹತರು ನೀವು ಕೇಳಿರೇ!
ವಿಭೂತಿಯನೊಲ್ಲದೆ ಬಿಳೆಯ ಮಣ್ಣನಿಡುವ
ಶ್ವಪಚರೆಲ್ಲಾ ನೀವು ಕೇಳಿರೇ!
ಹರಿಯೂ ಹರನೂ ಹರಿಯೆಂದು ಗಳುಹುವ
ಮರುಳವಿಪ್ರರರು ನೀವು ಕೇಳಿರೇ!
ಆದಿಯಲ್ಲಿ ಶ್ರೀವಿಷ್ಣು ಮೇದಿನಿಯರಿಯೆ
ಒಂದು ನಯನವನು ಪುಷ್ಪಮಾಗಿತ್ತು ಪಡೆಯನೇ ವೈಕುಂಠವನು?
ವೇದಕ್ಕೆ ನೆಲಗಟ್ಟಾವುದೆಂದು ಬಲ್ಲಡೆ ನೀವು ಹೇಳಿರೆ!
ಬ್ರಾಹ್ಮಣಿಕೆಗೆ ನೆಲೆಗಟ್ಟಾವುದೆಂಬುದು ಬಲ್ಲಡೆ ನೀವು ಹೇಳಿರೆ!
ವೇದಕ್ಕೆ ನೆಲೆಗಟ್ಟು ಓಂಕಾರ, ಬ್ರಾಹ್ಮಣಕ್ಕೆ ನೆಲಗಟ್ಟು ಗಾಯತ್ರೀ.
ಓಂಕಾರವೇನ ಹೇಳಿತ್ತು, ಗಾಯತ್ರಿಯೇನ ಹೇಳಿತ್ತೆಂಬುದ
ತಿಳಿದು ವಿಚಾರಿಸಿಕೊಳ್ಳಿರೇ ಶ್ರುತಿಗಳೊಳಗೆ. ಅದೆಂತೆಂದಡೆ:
ʼಓಂಕಾರಪ್ರಭವಾ ವೇದಾ ಓಂಕಾರಪ್ರಭವಾಸ್ಸ್ವರಾಃ
ಓಂಕಾರಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಂʼ
ಇನ್ನು ಗಾಯತ್ರಿ:
ಓಂ ಮಹಃ ಓಂ ಜನಃ ಓಂ ತಪಃ
ʼಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್'
ಎಂದು ಶ್ರಾದ್ಧ ತದ್ದಿನ ಪಿತೃಕಾರ್ಯವ ಮಾಡುವಲ್ಲಿ
ವಿಶ್ವದೇವರ ಸ್ಥಾಪನೆಯಂ ಮಾಡುವಿರಿ.
`ವಿಶ್ವದೇವಾಯ ಸ್ವಾಹಾ' ಎಂದು ಅರ್ಚನೆ ವಂದನೆಯಂ ಮಾಡುವಿರಿ.
ಯಥೋಕ್ತವಾಗಲಿ ಯಥಾಕಾಲವಾಗಲೆಂದು ಬೇಡಿಕೊಂಬಿರಿ.
`ಗಯಾಯಾಂ ಶ್ರೀರುದ್ರಪಾದೇ ದತ್ತಮಸ್ತು' ಎಂದೆಂಬಿರಲ್ಲಾ
`ಗಯಾಯಾಂ ಶ್ರೀವಿಷ್ಣುಪಾದೇ ದತ್ತಮಸ್ತು' ಎಂದೆಂದುಂಟಾದಡೆ ಹೇಳಿರೇ.
ಸತಿಗೆ ಪಿಂಡವ ಕೊಡುವಲ್ಲಿ
ʼವಸುರುದ್ರಾದಿತ್ಯರೂಪೇಭ್ಯೋ ಮಧ್ಯಪಿಂಡಸ್ತು ಪುತ್ರದಃ
ವೇದೋಕ್ತರುದ್ರನಿರ್ಮಾಲ್ಯಂ ಉರಸ್ಥಾನ್ಯಪವಿತ್ರಕಂ'
ಆದಿಪಿಂಡಾಂತ್ಯಪಿಂಡಂ ಚ ವರ್ಜಯೇತ್ ಸತತಂ ಬುಧಃʼ
ಎಂದು ರುದ್ರಪಿಂಡದಿಂದ ಉತ್ಪತ್ಯವಾಗಿ
ಮರಳಿ ಭಕ್ತರ ಜರಿದು ಗಳಹುವಾ ಪಾತಕರೆಲ್ಲರೂ ನೀವು ಕೇಳಿರೇ
ಭಕ್ತರು ಕೊಂಬುದೇ ಪಾದೋದಕ ಪ್ರಸಾದ,
ನೀವು ಉಂಬುದೇ ಭೂತಶೇಷ.
ಅದೆಂತೆಂದೊಡೆ ಮಂತ್ರ:
`ಪ್ರಾಣಾಯ ಸ್ವಾಹಾ ಅಪಾನಾಯ ಸ್ವಾಹಾ ವ್ಯಾನಾಯ ಸ್ವಾಹಾ
ಉದಾನಾಯ ಸ್ವಾಹಾ ಸಮನಾಯ ಸ್ವಾಹಾ' ಎಂದು
ಪಂಚಭೂತಕ್ಕೆ ಬಲಿಯನಿಕ್ಕಿ,
ಆ ಭೂತಶೇಷವ ತಿಂಬ ಭೂತಪ್ರಾಣಿಯ
ಲಿಂಗಪ್ರಾಣಿಗೆ ಸರಿಯೆಂಬವನ ಬಾಯಲ್ಲಿ ಕೆರ್ಪನಿಕ್ಕಿ
ಈಶಭಕ್ತಿಯ ಮೆರೆವ ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Accabhavitanadinda niccanarakakkiḷiva
karmacāṇḍālavipraru nīvu kēḷirē!
Īśabhaktara kaṇḍu dūṣisi narakakkiḷiva
śāpahataru nīvu kēḷirē!
Vibhūtiyanollade biḷeya maṇṇaniḍuva
śvapacarellā nīvu kēḷirē!
Hariyū haranū hariyendu gaḷuhuva
maruḷaviprararu nīvu kēḷirē!
Ādiyalli śrīviṣṇu mēdiniyariye
ondu nayanavanu puṣpamāgittu paḍeyanē vaikuṇṭhavanu?
Vēdakke nelagaṭṭāvudendu ballaḍe nīvu hēḷire!
Brāhmaṇikege nelegaṭṭāvudembudu ballaḍe nīvu hēḷire!
Vēdakke nelegaṭṭu ōṅkāra, brāhmaṇakke nelagaṭṭu gāyatrī.
Ōṅkāravēna hēḷittu, gāyatriyēna hēḷittembuda
tiḷidu vicārisikoḷḷirē śrutigaḷoḷage. Adentendaḍe:
ʼōṅkāraprabhavā vēdā ōṅkāraprabhavās'svarāḥ
ōṅkāraprabhavaṁ sarvaṁ trailōkyaṁ sacarācaraṁʼ
innu gāyatri:
Ōṁ mahaḥ ōṁ janaḥ ōṁ tapaḥ
ʼōṁ satyaṁ ōṁ tatsaviturvarēṇyaṁ
bhargō dēvasya dhīmahi dhiyō yō naḥ pracōdayāt'
endu śrād'dha taddina pitr̥kāryava māḍuvalli
viśvadēvara sthāpaneyaṁ māḍuviri.
`Viśvadēvāya svāhā' endu arcane vandaneyaṁ māḍuviri.
Yathōktavāgali yathākālavāgalendu bēḍikombiri.
`Gayāyāṁ śrīrudrapādē dattamastu' endembirallā
`gayāyāṁ śrīviṣṇupādē dattamastu' endenduṇṭādaḍe hēḷirē.
Satige piṇḍava koḍuvalli
ʼvasurudrādityarūpēbhyō madhyapiṇḍastu putradaḥ
Vēdōktarudranirmālyaṁ urasthān'yapavitrakaṁ'
ādipiṇḍāntyapiṇḍaṁ ca varjayēt satataṁ budhaḥʼ
endu rudrapiṇḍadinda utpatyavāgi
maraḷi bhaktara jaridu gaḷahuvā pātakarellarū nīvu kēḷirē
bhaktaru kombudē pādōdaka prasāda,
nīvu umbudē bhūtaśēṣa.
Adentendoḍe mantra:
`Prāṇāya svāhā apānāya svāhā vyānāya svāhā
udānāya svāhā samanāya svāhā' endu
pan̄cabhūtakke baliyanikki,
ā bhūtaśēṣava timba bhūtaprāṇiya
liṅgaprāṇige sariyembavana bāyalli kerpanikki
īśabhaktiya mereva nam'ma uriliṅgapeddipriya viśvēśvarā.