Index   ವಚನ - 50    Search  
 
ಆಹ್ವಾನ ವಿಸರ್ಜನೆಗಳ ಮಾಡಲೇಕಯ್ಯ ಶರಣಂಗೆ? ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದೆನಿಸಿದ ಬಳಿಕ ಉಂಟೆ ಲೌಕಿಕರ ಉಪಚಾರಂಗಳು? ನಿತ್ಯನಿರಂಜನನೈಕ್ಯನೆಂಬ ನಿರೂಪದಲ್ಲಿ ಸ್ವರೂಪ ತಾನಾದ ಬಳಿಕ ಉಂಟೆ ಲೌಕಿಕರ ತನುವಿನಂತೆ ತನುಗುಣ? ತನುಗುಣ ನಾಸ್ತಿಯಾದ ಬಳಿಕ, ಉಂಟೆ ತಾಮಸಕ್ಕೆ ಎಡೆ? ಇಲ್ಲ. ಅದು ಹೇಗೆಂದಡೆ- ಗುರುಕೃಪಾದೃಷ್ಟಿಯಿಂದ ತಾನೆಯಾದ ಬಳಿಕ ಇಲ್ಲಿಲ್ಲ ದೇಹಾದಿ ವಿಕಾರಂಗಳು, ಇಲ್ಲಿಲ್ಲ ಕರಣೇಂದ್ರಿಯಾದಿ ವಿಕಾರಂಗಳು. ಅದ್ವೈತವ ಮೀರಿದೆ, ಬೊಮ್ಮವ ಸಾರಿದೆ, ಸಾಕಾರವ ಹರಿದೆನು. [ಇದರಿಂದ] ನೂನೈಶ್ವರ್ಯವದುಂಟೆ? ವಾಙ್ಮಾನಸಜಿಹ್ವೆಗೆ ಅಗೋಚರವಾಗುತಿದ್ದಂತಹ ವಸ್ತುವ ಕಂಡೆ. ಸಕಲ ಶೂನ್ಯಾತೀತವ ಎಯ್ದಿದೆ, ಸ್ವಾನುಭಾವವನೊಡಗೂಡಿದೆ. ಮಹಾಲಿಂಗದ ಬಾಧೆ ಬಂದಡೆ ಉಣ್ಣೆನು, ಉಂಡಡೆ ಕಾಣೆ, ಕಂಡಡೆ ಮುಗಿಲ ಮುಟ್ಟಿದುದರುದ್ದವ ನೋಡಾ. ಎಂದು ದೀಕ್ಷೆ ಶಿಕ್ಷೆ ಸ್ವಾನುಭಾವವ ಸಂಬಂಧಿಸಿ ಶುದ್ಧ ನಿಷ್ಕಲವಾದ ಬಳಿಕ ಮರಳಿ ಪ್ರಪಂಚಿನ ಹಂಗುಂಟೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ?