Index   ವಚನ - 176    Search  
 
ಪುಣ್ಯಾಂಗನೆಯ ಸುತಂಗೆ ಪಿತನುಂಟು, ಪಿತಾಮಹನುಂಟು, ಪ್ರಪಿತಾಮಹನುಂಟು. ಪಣ್ಯಾಂಗನೆಯ ಸುತಂಗೆ ಪಿತನಿಲ್ಲ, ಮೇಲೇನೂ ಇಲ್ಲ, ಅವನ ಬದುಕು ನಗೆಗೆಡೆ. ಭಕ್ತಾಂಗನೆಯ ಸುತನಹ ಸದ್ಭಕ್ತಂಗೆ ಪಿತನು ಗುರು, ಪಿತಾಮಹನು ಜಂಗಮ, ಪ್ರಪಿತಾಮಹನು ಮಹಾಲಿಂಗ ಉಂಟು ಕೇಳಿರಣ್ಣಾ. ಅಭಕ್ತಾಂಗನೆಯ ಸುತನಹ ತಾಮಸಭಕ್ತಂಗೆ ಪಿತನಹ ಗುರುವಿಲ್ಲ, ಪಿತಾಮಹ ಜಂಗಮವಿಲ್ಲ, ಪ್ರಪಿತಾಮಹ ಮಹಾಲಿಂಗವಿಲ್ಲ. ಅವನ ಸ್ಥಿತಿ ಗತಿ ನಗೆಗೆಡೆ ಕೇಳಿರಣ್ಣಾ, ಇದು ದೃಷ್ಟ ನೋಡಿರೆ. ಇದು ಕಾರಣ, ಭಕ್ತಿಹೀನನಾದ ಅಭಕ್ತಾಂಗನೆಯ ಮಗನ ಸಂಗವ ಬಿಡಿಸಿ ಸದ್ಭಕ್ತಿ ಸದಾಚಾರಸಂಪನ್ನರಪ್ಪ ಶರಣರ ಸಂಗದಲ್ಲಿರಿಸಯ್ಯಾ, ನಿಮ್ಮ ಬೇಡಿಕೊಂಬೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.