Index   ವಚನ - 211    Search  
 
ಮದ್ಗುರುವೆ ಸದ್ಗುರುವೆ ತ್ರಿಜಗದ್ಗುರುವೆ ಶಿವಂಗೆ ಮಾತೆಯಾದ ಮನೋರಥವೀವ ಮಹದ್ಗುರುವೆ ಶಿವ ಇವ ಉಪಮಾತೀತನೆ 'ಮನ್ನಾಥಃ ಶ್ರೀಜಗನ್ನಾಥೋ ಮದ್ಗುರುಃ ಶ್ರೀಜಗದ್ಗುರುಃ ಮಮಾತ್ಮಾ ಸರ್ವಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ' ಎಂದುದಾಗಿ, ಶ್ರೀಗುರುವೆ, ನಿನ್ನ ನಿರೀಕ್ಷಣೆ ಮಾತ್ರದಲ್ಲಿ ಸಕಲಯೋನಿಜರು ಪಶುಪಾಶಹರರು, ಪಶುರ್ನಾಥಃ ಶಿವಸ್ತಸ್ಮಾತ್ ಪಶೂನಾಂ ಪತಿರಿತ್ಯಭೂತ್ ಪಶುಪಾಶವಿನಿರ್ಮುಕ್ತೈ ಗುರೋರಾಜ್ಞಾಂ ನಿರೀಕ್ಷಯೇತ್ ಎಂದುದಾಗಿ, ಸಂಸ್ಕಾರಿಗಳಿಗಲ್ಲದೆ ಅಪ್ಪುದೆ ನಿನ್ನ ನಿರೀಕ್ಷಣೆ? ಹೋಹುದೆ ಅವನ ಭವಪಾಶವು? ``ಅಣುರೇಣುತೃಣಕಾಷ್ಠ ಶಿಲಾಗುಲ್ಮಲತಾವಳಿ ಭೂತೋಯಾನಲಮರುದಾಕಾಶಸ್ಥಃ ``ಏಕ ಏವ ನ ದ್ವಿತೀಯಾಯತಸ್ಥೇ ಎಂದುದಾಗಿ, ಇದು ಕಾರಣ, ಪರಿಪೂರ್ಣ ಶಿವನು. ಅದು ಹೇಗೆಂದಡೆ : ಘಟದೊಳಗೆ ಇದ್ದ ಜಲಕ್ಕೆ ಉಷ್ಣವಿಸಿ ಆ ಜಲವು ತದ್ರೂಪಹಂಗೆ ಸದ್ಗುರುಸ್ವಾಮಿ ಅಂಗಲಿಂಗವ ಸಂಬಂಧಮಾಡಿದ ಬಳಿಕ ಪ್ರಾಣಲಿಂಗಸಂಬಂಧವಾದ ಭೇದ : 'ಸ್ವಾನುಭಾವೇ ತು ಸಂಬಂಧಿ ಕ್ರಿಯಾಲಿಂಗಸ್ಯ ಪೂಜನಂ ನಿಷ್ಕ್ರಿಯಂ ಪ್ರಾಣಲಿಂಗಂ ತು ಕ್ರಿಯಾಲಿಂಗಸ್ಯ ಪೂಜನಂ' ಬಾಹ್ಯಲಿಂಗಾರ್ಚನಂ ಯತ್ ಸ್ಯಾತ್ ತತ್ ಕ್ರಿಯಾಲಿಂಗಪೂಜನಂ ಎಂದುದಾಗಿ, ಕ್ರಿಯಾಕಾರದಿಂ ಗುರು ತೋರಿದ ಲಿಂಗದಿಂದ ಸ್ವಾನುಭಾವಲಿಂಗವ ಕಂಡರಿತು ಬದುಕಿದೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.