Index   ವಚನ - 233    Search  
 
ಲಿಂಗದೇವನ ನಂಬಿದವಂಗೆ ಜ್ಞಾನವಿದೆ, ಅಷ್ಟಮಹದೈಶ್ವರ್ಯ ಲಿಂಗಭೋಗ ಆವುದೂ ಕೊರತೆ ಇಲ್ಲ. ಸುಖಪರಿಣಾಮಿ, ಆ ಮಹಿಮಂಗೆ ಮಾನವರಾರೂ ಪಡಿಯಲ್ಲ. ಲಿಂಗದೇವನ ನಂಬದವಂಗೆ ಜ್ಞಾನವಿಲ್ಲ, ಐಶ್ವರ್ಯ ಭೋಗ ಆವುದೂ ಇಲ್ಲ, ಇಹಪರವಿಲ್ಲ. ಇದನರಿದು ತನ್ನ ತಾನು ವಿಚಾರಿಸಿಕೊಂಬುದಯ್ಯಾ. ಲಿಂಗವ ನಂಬಿದಡೆ ಸರ್ವಸಿದ್ಧಿ, ಲಿಂಗವ ನಂಬದಿರ್ದಡೆ ನಾಯಕನರಕ. ಇನ್ನಾದಡೂ ನಂಬಿ ಬದುಕಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.